ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಸೌಧದ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ನಾಲ್ವಡಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಎಚ್.ಡಿ.ಕೋಟೆ: ಒಂದು ವರ್ಗಕ್ಕೆ ಸೀಮಿತ ಆಗಿದ್ದ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿದ ಕೀರ್ತಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಕಿರಣ್ ಶೇಡ್ಲೇಹಳ್ಳಿ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗುರುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುದ್ಧ ಮಾಡುವವನು ರಾಜನಲ್ಲ, ಯುದ್ಧ ಆಗದಂತೆ ನೋಡಿಕೊಳ್ಳುವವನು ನಿಜವಾದ ರಾಜ. ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವೇ ಉದಾಹರಣೆ ಎಂದರು.
ನಾಲ್ವಡಿಯವರ ವಿಚಾರಧಾರೆಗಳನ್ನು ನಮ್ಮ ಮಕ್ಕಳಿಗೆ ತಲುಪಿಸುವಲ್ಲಿ ನಾವು ಹಿಂದಿದ್ದೇವೆ. ಮೈಸೂರು ಸಂಸ್ಥಾನಕ್ಕೆ ವಿಶ್ವ ಮಟ್ಟದಲ್ಲಿ ಸ್ಥಾನಮಾನ ಬರಲು ಅವರ ದೂರದೃಷ್ಟಿಯೇ ಕಾರಣ ಎಂದು ಸ್ಮರಿಸಿದರು.
ನಾಲ್ವಡಿ ಅವರು ಒಬ್ಬ ವ್ಯಕ್ತಿ ಆಗದೆ ಮೈಸೂರು ಸಂಸ್ಥಾನಕ್ಕೆ ಒಂದು ಶಕ್ತಿ ಆಗಿದ್ದರು ಎಂದರು.
ಉಪ ತಹಸೀಲ್ದಾರ್ ಮಹೇಶ್, ಸಿದ್ದರಾಜು, ವಿನೋದ್, ಶಶಿಕಲಾ, ನೇತ್ರಾವತಿ, ದಿನೇಶ್, ಜಾಹೀದಾ ಬಾನು, ಬಸವರಾಜು, ನಂಜಪ್ಪ ಇದ್ದರು.