ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ಆಕರ್ಷಣೆ

ಪರಿಸರ ವೀಕ್ಷಣಾ ಗೋಪುರ ಮಾದರಿ
ಪರಿಸರ ವೀಕ್ಷಣಾ ಗೋಪುರ ಮಾದರಿ
Published on

ಪ್ರಮುಖ ಮುಖ್ಯಾಂಶಗಳು

  • ಮನಸೊರೆಗೊಳಿಸಲಿದೆ ಕಾರಂಜಿ ಕೆರೆ ಉದ್ಯಾನ
  • 18 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
  • ಪರಿಸರ ಅನುಭವ ವಲಯ ನಿರ್ಮಾಣ
ಮೈಸೂರು: ಜೀವವೈವಿಧ್ಯ ತಾಣವಾಗಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದು ದೇಶ-ವಿದೇಶಗಳಿಂದ ಬರುವ ಪ್ರವಾಸಿಗರನ್ನು ಮನಸೊರೆಗೊಳಿಸಲಿದೆ.
ಈ ಕೆಲಸ ಪೂರ್ಣಗೊಂಡ ಬಳಿಕ, ಪರಿಸರ ವೀಕ್ಷಣಾ ಗೋಪುರ(ಇಕೋ ಟವರ್) ಏರಿ, ಜಿಪ್‌ಲೈನ್‌ನಲ್ಲಿ ಸಂಚರಿಸಿ, ಲೇಕ್‌ವಾಕ್ ಮತ್ತು ಕೆನೋಪಿ ವಾಕ್‌ನಲ್ಲಿ ತಿರುಗಾಡಿ ಇಲ್ಲಿಯ ಪರಿಸರ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ 2.0 ಯೋಜನೆಯಡಿ 18 ಕೋಟಿ ರೂ. ವೆಚ್ಚದಲ್ಲಿ ‘ಎಕಾಲಾಜಿಕಲ್ ಎಕ್ಸ್‌ಪೀರಿಯೆನ್ಸ್ ಝೋನ್(ಇಇಝಡ್)’ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮೂಲಕ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ.
ಪ್ರಸಿದ್ಧ ಪ್ರವಾಸಿ ಆಕರ್ಷಣೆ ತಾಣವಾಗಿರುವ ಕಾರಂಜಿಕೆರೆ 90 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಸುಂದರವಾದ ಪ್ರಕೃತಿ ಉದ್ಯಾನ, ಚಿಟ್ಟೆ ಉದ್ಯಾನ, ಪ್ರವಾಸಿಗರು ಪಕ್ಷಿಗಳ ನಡುವೆ ನಡೆದಾಡುವ ಅನುಭವವೇ ಭಿನ್ನ. ನಗರದ ಶ್ರೀಚಾಮರಾಜೇಂದ್ರ ಮೃಗಾಲಯದ ಅಧೀನದಲ್ಲಿರುವ ಇದು ವಲಸೆ ಹಕ್ಕಿಗಳಿಗೆ ನೆಚ್ಚಿನ ತಾಣವೂ ಹೌದು. ಆದರೆ, ಈಗ ನಡೆಯುತ್ತಿರುವ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಂದ ಇಲ್ಲಿಯ ನೈಸರ್ಗಿಕ ಪರಿಸರಕ್ಕೆ ಮಾರಕವಾಗಲಿದೆಯೇ ಎಂಬ ಆತಂಕವೂ ಮನೆ ಮಾಡಿದೆ.
ಈ ನಡುವೆಯೇ ಪರಿಸರಕ್ಕೆ ಧಕ್ಕೆಯಾಗದಂತೆ ಕಟ್ಟೆಚ್ಚರ ವಹಿಸುವ ಷರತ್ತಿನೊಂದಿಗೆ ಕಾಮಗಾರಿ ನಡೆಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರವು ಅನುಮತಿ ನೀಡಿದೆ. ಕಾಮಗಾರಿ ಬಿರುಸುಗೊಂಡಿದೆ. ತ್ವರಿತಗತಿಯಲ್ಲಿ ಮುಂದಿನ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಪ್ರವಾಸಿಗರು ಪರಿಸರ ವೀಕ್ಷಣಾ ಗೋಪುರ, ಜಿಪ್‌ಲೈನ್ ಸೇರಿದಂತೆ ವಿವಿಧ ಚಟುವಟಿಕೆಗಳ ಆಸ್ವಾದಿಸಬಹುದಾಗಿದೆ.  
ಪ್ರಮುಖ ಆಕರ್ಷಣೆ ಇಕೋ ಟವರ್:
ಕಾರಂಜಿಕೆರೆ ಆವರಣದಲ್ಲಿ ಥಂಡಿ ಸಡಕ್ ರಸ್ತೆಗೆ ಹೊಂದಿಕೊಂಡಂತೆ ಇಕೋ ಟವರ್ ನಿರ್ಮಾಣವಾಗುತ್ತಿದ್ದು, ದಕ್ಷಿಣ ಕರ್ನಾಟಕದಲ್ಲಿ ಇದು ಮೊದಲ ಇಕೋ ಟವರ್ ಎಂಬ ಹಿರಿಮೆಗೆ ಪಾತ್ರವಾಗಲಿದೆ. 
21 ಮೀಟರ್ ಎತ್ತರದಲ್ಲಿ 7 ಅಂತಸ್ತಿನ ಪರಿಸರ ವೀಕ್ಷಣಾ ಗೋಪುರ ಇದಾಗಿದ್ದು, ಇದನ್ನು ಏರಲು ವೃತ್ತಕಾರದಲ್ಲಿ ರ‌್ಯಾಂಪ್ ವ್ಯವಸ್ಥೆ ಇರಲಿದೆ. ಟವರ್‌ನ ನಿರ್ಮಾಣಕ್ಕೆ 24 ಮೀಟರ್ ಅಗಲದ ಅಡಿಪಾಯ ಹಾಕಲಾಗುತ್ತಿದ್ದು, ಅದರ ಅಗಲ 17.25 ಮೀಟರ್ ಇರುತ್ತದೆ. ಇದರಿಂದ ಏಕಕಾಲಕ್ಕೆ ನೂರಾರು ಜನರು ಟವರ್ ಮೇಲೆ ನಿಂತುಕೊಂಡು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದು ಪಕ್ಷಿ ವೀಕ್ಷಣೆಗೂ ಸಹಕಾರಿಯಾಗಲಿದೆ. ಹೀಗಾಗಿ ಪರಿಸರ ವೀಕ್ಷಣಾ ಗೋಪುರವೇ ಪ್ರಮುಖ ಆಕರ್ಷಣೆಯಾಗಲಿದೆ. 

ನಡಿಗೆ ಪಥದ ಮೆರುಗು: 

ಕಾರಂಜಿಕೆರೆಯಲ್ಲಿ ಮುಖ್ಯದ್ವಾರ ಟಿಕೆಟ್ ಕೌಂಟರ್‌ನಿಂದ ಎಕೋ ಟವರ್‌ವರೆಗೆ 3 ಕಿ.ಮೀ. ನಡಿಗೆ ಪಥ(ವಾಕಿಂಗ್ ಪಾಥ್) ನಿರ್ಮಿಸಲಾಗುತ್ತದೆ. ಈಗಾಗಲೇ ಪ್ರವಾಸಿಗರಿಗೆ ವಾಕಿಂಗ್ ಪಾಥ್ ಇದ್ದು, ಅದನ್ನು ಸ್ವದೇಶಿ ದರ್ಶನ್ 2.0 ಯೋಜನೆಯಡಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತದೆ. 

ಪರಿಸರ ವೀಕ್ಷಣೆಗೆ ಜಿಪ್‌ಲೈನ್: 

ಕಾರಂಜಿಕೆರೆ ಆವರಣದಲ್ಲಿ ಥಂಡಿ ಸಡಕ್ ರಸ್ತೆಗೆ ಹೊಂದಿಕೊಂಡಂತೆ 450 ಮೀಟರ್ ಉದ್ದ ಜಿಪ್‌ಲೈನ್ ನಿರ್ಮಾಣವಾಗಲಿದೆ. ಇಕೋ ಟವರ್ ಬಳಿಯಿಂದ ಜಿಪ್‌ಲೈನ್‌ನಲ್ಲಿ ಬಂದು, ಲಲಿತಮಹಲ್ ಮುಖ್ಯ ರಸ್ತೆ ಕಾರಂಜಿಕರೆ ಪ್ರವೇಶ ದ್ವಾರದ ಸಮೀಪ ಇಳಿಯಬಹುದಾಗಿದೆ. ಕೆರೆ ಮೇಲೆ ಜಿಪ್‌ಲೈನ್ ಪ್ರಯಾಣಿಸುವುದರಿಂದ ಕೆರೆ ಪರಿಸರ ವೀಕ್ಷಣೆಗೆ ಅವಕಾಶ ಸಿಗಲಿದೆ
ಜಿಪ್‌ಲೈನ್ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲಾಗುತ್ತಿದ್ದು, ಜಿಪ್‌ಲೈನ್ ಕಾರಂಜಿಕೆರೆಯ ಚಿಟ್ಟೆ ಪಾರ್ಕ್‌ಗೆ ಹೊಂದಿಕೊಂಡಂತೆ ನಿರ್ಮಾಣವಾಗಲಿದೆ. ಕೆರೆ ನೀರಿನ ಮೇಲೆ 18 ಮೀಟರ್ ಎತ್ತರದಲ್ಲಿ ರೋಪ್ ಅಳವಡಿಸಲಾಗುತ್ತದೆ. ಇದರಿಂದ ಜಿಪ್‌ಲೈನ್ ಸಾಹಸ ಮಾಡುವ ಪ್ರವಾಸಿಗರಿಗೆ ಉತ್ತಮ ಅನುಭವ ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ.

ಲೇಕ್, ಕೆನೋಪಿ ವಾಕ್‌ನಲ್ಲಿ ನಡಿಗೆ

ಈ ಕೆರೆಯಲ್ಲಿ ಇಕೋ ಟವರ್ ಬಳಿಯಿಂದ ಲೇಕ್ ಮತ್ತು ಕೆನೋಪಿ ವಾಕ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. 350 ಮೀಟರ್ ಉದ್ದ ಇರುವ ಈ ಲೇಕ್ ಮತ್ತು ಕೆನೋಪಿ ವಾಕ್ ಹೊಸ ಅನುಭವ ನೀಡಲಿದೆ. ಟವರ್‌ಗೆ ಹೊಂದಿಕೊಂಡಂತೆ ಕೆಳಗೆ ಲೇಕ್‌ವಾಕ್‌ಗೆ ಸೇತುವೆ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಿದರೆ, ಅದರ ಮೇಲೆ ಕೆನೋಪಿ ವಾಕ್‌ಗೆ ಮತ್ತೊಂದು ಸೇತುವೆ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ನೀರಿನ ಮೇಲೆ ನಡಿಗೆ ಮಾಡಿದಂತಾಗಲಿದ್ದು, ಕೆರೆ ಪರಿಸರ ವೀಕ್ಷಿಸುವ ಅನುಭವ ದೊರೆಯಲಿದೆ.

ರೋಪ್ ಬ್ರಿಡ್ಜ್: 

ಮಕ್ಕಳಿಗಾಗಿ 30 ಮೀಟರ್ ಉದ್ದದ ರೋಪ್ ಬ್ರಿಡ್ಜ್ ನಿರ್ಮಿಸಲಾಗುತ್ತದೆ. ಹಗ್ಗ ಮತ್ತು ರೋಪ್‌ನಿಂದ ನಿರ್ಮಿಸಲಾಗುವ ಇದು ತೂಗುವ ಸೇತುವೆಯಂತೆ ಮಕ್ಕಳಿಗೆ ಅನುಭವ ನೀಡಲಿದೆ. ಕಾರಂಜಿಕೆರೆಗೆ ಬರುವ ಪ್ರವಾಸಿಗರಿಗೆ ತಿಂಡಿ, ತಿನಿಸು ಸಿಗುತ್ತಿಲ್ಲ. 
ಇದರಿಂದ 3 ಕಿ.ಮೀ. ನಡೆದುಕೊಂಡು ಬರುವ ಪ್ರವಾಸಿಗರು ತಿನ್ನಲು ತಿಂಡಿ ಹಾಗೂ ಕುಡಿಯಲು ನೀರಿನ ಬಾಟಲಿ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫುಡ್ ಕಿಯಾಸ್ಕ್ ನಿರ್ಮಾಣ ಮಾಡಿ, ಅದರಲ್ಲಿ ಎರಡು ಕಂಟೇನರ್ ಇಡಲಾಗುತ್ತದೆ. ಇದರಲ್ಲಿ ನೀರು, ಪಾನೀಯ, ಚಾಟ್ಸ್, ತಿಂಡಿ ಮಾರಾಟದ ಚಿಕ್ಕಿ ಮಳಿಗೆ ಇರಲಿದ್ದು, ಅವುಗಳನ್ನು ಮೃಗಾಲಯದಿಂದ ನಿರ್ವಹಿಸಲಾಗುತ್ತದೆ.

9 ತಿಂಗಳೊಳಗೆ ಪೂರ್ಣ ಗಡುವು

ಈಗಾಗಲೇ ಇಕೋ ಟವರ್‌ಗೆ ಬೃಹತ್ ಆಕಾರದ ಪಿಲ್ಲರ್ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಈಗಾಗಲೇ ಪಿಲ್ಲರ್‌ಗೆ ಅಡಿಪಾಯ ಹಾಕುವ ಕಾಮಗಾರಿ ನಡೆಸಿ, ಕ್ಯೂರಿಂಗ್ ಮಾಡಿದ್ದು, ಟವರ್ ನಿರ್ಮಾಣಕ್ಕೆ ಬೇಕಾದ ಕಬ್ಬಿಣದ ಕೆಲಸ ಪ್ರಗತಿಯಲ್ಲಿ ಇದೆ. 
ಎಲ್ಲ ಕಾಮಗಾರಿಯನ್ನು 9 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಆದರೆ ವಿವಿಧ ಕಾರಣಕ್ಕೆ ಎರಡು ತಿಂಗಳು ತಡವಾಗಿದ್ದು, ಇದರಿಂದಾಗಿ ವರ್ಷದೊಳಗೆ ಕಾರಂಜಿಕೆರೆಯಲ್ಲಿ ಇಕೋ ಟವರ್, ಜಿಪ್‌ಲೈನ್, ರೋಪ್ ಬ್ರಿಡ್ಜ್, ಕೆನೋಪಿ, ಲೇಕ್ ವಾಕ್ ನಿರ್ಮಾಣಗೊಂಡು ಪ್ರವಾಸಿಗರ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ಇಲ್ಲಿಯ ಪರಿಸರಕ್ಕೆ ಮಾರಕವಾಗದಿರಲಿ

ಕಾರಂಜಿಕೆರೆಯು ಜೀವವೈವಿಧ್ಯದ ನೈಸರ್ಗಿಕ ತಾಣವಾಗಿದೆ. ಪ್ರಸ್ತುತ ಕೆರೆ ಪರಿಸರದಲ್ಲಿ ವಿವಿಧ ಬಗೆಯ ಪಕ್ಷಿ ಸಂಕುಲ, ವಿವಿಧ ಬಗೆಯ ಚಿಟ್ಟೆ ಸಂತತಿ, ದೋಣಿ ವಿಹಾರವೂ ಲಭ್ಯವಿದೆ. ಈ ಹೊಸ ಚಟುವಟಿಕೆಯಿಂದ ಕೆರೆ ಪರಿಸರ ವೀಕ್ಷಣೆಯ ಸದಾವಕಾಶವೂ ದೊರೆಯುವುದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತದೆ. ಜತೆಗೆ ಇಲ್ಲಿಯ ಪರಿಸರ, ಜೀವಿಗಳಿಗೆ ತೊಂದರೆಯಾಗಲಿದೆ ಎಂಬ ಕಳವಳವೂ ವ್ಯಕ್ತವಾಗುತ್ತಿದೆ.
"

ಕಾರಂಜಿಕೆರೆಯಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಕೋ ಟವರ್, ಜಿಪ್‌ಲೈನ್ ವಿವಿಧ ಕೆಲಸವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ

— ಡಾ.ವಿ.ಎಂ.ಪ್ರಭುಸ್ವಾಮಿ ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net