ಮೈಸೂರು: ಕಂದಾಯ ಇಲಾಖೆಯ ಇ-ಪೌತಿ ಖಾತೆ ಆಂದೋಲನವು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಪ್ರತಿಯೊಂದು ಗ್ರಾಮ ಆಡಳಿತಾಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದ್ದು, ಬಾಕಿ ಇರುವ ಪೌತಿ ಅರ್ಜಿಗಳನ್ನು ಆಂದೋಲನದ ಮೂಲಕ ಈ ವಾರ ಪ್ರತಿ ಗ್ರಾಮ ಮಟ್ಟದಲ್ಲಿಯೂ ಆಯೋಜಿಸಲಾಗಿದೆ.
ಎಲ್ಲ ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಂದುವರಿದಿದ್ದು, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಮೈಸೂರು ತಾಲೂಕಿನ ವರುಣ ಹೋಬಳಿಗೆ ಸೇರಿದ ಹಾರೋಹಳ್ಳಿ ಮತ್ತು ಮೆಳ್ಳಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಲ್ಲಿನ ಗ್ರಾಮ ಆಡಳಿತಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ರೈತರೊಂದಿಗೆ ಸಂವಾದ ನಡೆಸಿದರು. ಸರ್ಕಾರದಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಿರುವ ಈ ಕಾರ್ಯಕ್ರಮವನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಗ್ರಾಮ ಮಟ್ಟದಲ್ಲಿ ಉಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಮಾಡಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಹೆಚ್ಚು ಸೇವೆ ನೀಡಿ ಫಲಾನುಭವಿಗಳಿಗೆ ಸರ್ಕಾರದ ಸೇವೆಯನ್ನು ಕೂಡಲೇ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಹಾರೋಹಳ್ಳಿ ಮತ್ತು ಮೆಳ್ಳಹಳ್ಳಿಗಳಲ್ಲಿ ಸುಮಾರು 1400ರಷ್ಟು ಪೌತಿ ಖಾತೆ ಬಾಕಿ ಇದ್ದು ಕೂಡಲೇ ಒಂದು ವಾರದಲ್ಲಿ ಪರಿಶೀಲಿಸಿ ನಿಯಮಾನುಸಾರ ವಿಲೇವಾರಿಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.
ವರುಣ ಹೋಬಳಿಯ ಉಪ ತಹಸೀಲ್ದಾರ್, ವರುಣ ಹೋಬಳಿಯ ಕಂದಾಯ ನಿರೀಕ್ಷಕರು, ಮೆಳ್ಳಹಳ್ಳಿ ಮತ್ತು ಹಾರೋಹಳ್ಳಿಯ ಕಂದಾಯ ಇಲಾಖಾ ಆಡಳಿತಾಧಿಕಾರಿಗಳು, ಗ್ರಾಮಸ್ಥರು ಇದ್ದರು.