ಮೈಸೂರು:ಕ್ಷೇತ್ರ ಮರು ವಿಂಗಡನೆ (ಡಿಲಿಮಿಟೇಷನ್) ಮುಂದಿಟ್ಟುಕೊಂಡು ಮಹಿಳಾ ಮೀಸಲಾತಿ ಮಸೂದೆ ಜಾರಿಯನ್ನು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಐಪ್ಪಾ-ಸಮತಾ ವೇದಿಕೆ ಅಧ್ಯಕ್ಷೆ ಡಾ.ಇ.ರತಿರಾವ್ ದೂರಿದರು.
ರಂಗಾಂತರ ಮೈಸೂರು, ಬಾರುಕೋಲು ಬಳಗ ಸಹಯೋಗದಲ್ಲಿ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಆಯೋಜಿಸಿದ್ದ ಲೇಖಕ ನಾ.ದಿವಾಕರ ರಚನೆಯ ಡಾ.ಬಿ.ಆರ್.ಅಂಬೇಡ್ಕರ್-ಸ್ತ್ರೀ ವಾದಿ ನೆಲೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ಮರು ವಿಂಗಡನೆ ಪ್ರಕ್ರಿಯೆ ಕೈಬಿಟ್ಟು ಸಂಸತ್ತಿನ ಈ ಬಾರಿಯ ಮಳೆಗಾಲದ ಅಧಿವೇಶನದಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಬೇಕು ಎಂದು ರತಿರಾವ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವುದು ಕಷ್ಟಕರವಾದ ಕೆಲಸವಲ್ಲ. ಈ ಮೊದಲೇ ಮಹಿಳಾ ಮೀಸಲು ಅಂಗೀಕರಿಸಲಾಗಿದೆ. ಆದರೆ ಇದಕ್ಕೆ ಕ್ಷೇತ್ರ ಮರು ವಿಂಗಡನೆ ಸೇರಿಸುವ ಹುನ್ನಾರದ ವಿಚಾರವನ್ನು ಮುಂದಿಟ್ಟುಕೊಂಡು ಅದರ ಜಾರಿಗೆ ವಿಳಂಬ ಮಾಡಲಾಗುತ್ತಿದೆ ಎಂದರು.
ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಹೋರಾಟದ ಇತಿಹಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ಅವರು ಮಾಡಿದ ಪ್ರಯತ್ನಗಳು ಐತಿಹಾಸಿಕವಾಗಿವೆ ಎಂದರು.
ಹಿಂದೂ ಕೋಡ್ ಬಿಲ್ ಅನ್ನು ಅಂಬೇಡ್ಕರ್ ಚರ್ಚೆಗೆ ತಂದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆಗಿನ ಪ್ರಧಾನಿ ನೆಹರೂ ಅವರು ಜನರಿಗೆ ಅದರ ಮಹತ್ವವನ್ನು ಮನವರಿಕೆ ಮಾಡಲು ಪ್ರಯತ್ನಿಸಿದರೂ ಅದನ್ನು ಸಂಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಲಿಲ್ಲ. ನಂತರ ಹಿಂದೂ ಕೋಡ್ ಬಿಲ್ ಅನ್ನು ನಾಲ್ಕು ಭಾಗಗಳಾಗಿ ವಿಭಜಿಸಿ ಚರ್ಚೆಗೆ ತರಲಾಯಿತು. ಈ ವೇಳೆ ಹಿಂದೂ ಧರ್ಮಕ್ಕೆ ಹೊಡೆತ ಬೀಳುತ್ತದೆ ಎಂಬ ವಾದಗಳೂ ಕೇಳಿಬಂದಿದ್ದವು ಎಂದು ನೆನಪಿಸಿದರು.
ಹಿಂದೂ ಕೋಡ್ ಬಿಲ್ ಅನ್ನು ಅಂಬೇಡ್ಕರ್ ಅತ್ಯಂತ ವೈಜ್ಞಾನಿಕ ದೃಷ್ಟಿಕೋನದಿಂದ ರಚಿಸಿದ್ದರು. ಅದರ ಜಾರಿಗೆ ಅಪಾರ ಪರಿಶ್ರಮ ವಹಿಸಿದ್ದರು. ಆದರೆ ಹೋರಾಟಕ್ಕೆ ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ತಿಳಿಸಿದರು
ಹಿಂದೂ ಕೋಡ್ ಬಿಲ್ ಕುರಿತು ಅನೇಕ ಮಹಿಳಾ ಹೋರಾಟಗಾರರು ಮತ್ತು ಚಿಂತಕರು ಸಾವಿರಾರು ಪುಸ್ತಕಗಳನ್ನು ಬರೆದಿದ್ದಾರೆ. ಕುಟುಂಬದೊಳಗಿನ ಹಿಂಸೆ, ಸಾಮಾಜಿಕ ವಲಯದಲ್ಲಿ ಮಹಿಳೆಯರ ಮೇಲೆ ನಡೆಯುವ ಅನ್ಯಾಯಗಳ ವಿರುದ್ಧ ಕಾನೂನು ರಕ್ಷಣೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಲೇಖಕ ನಾ.ದಿವಾಕರ್ ರಚನೆಯ ಪುಸ್ತಕವು ಅತ್ಯಂತ ಮಹತ್ವದ್ದಾಗಿದೆ ಎಂದರು
ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷ ವಸಂತ, ಸಮತಾ ವೇದಿಕೆಯ ಕೆ.ಸುಶೀಲಾ, ಪತ್ರಕರ್ತ ರಂಗಸ್ವಾಮಿ, ಲೇಖಕ ನಾ.ದಿವಾಕರ ಇದ್ದರು.