ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಅಧ್ಯಕ್ಷರಾಗಿ ಕೆ.ಆರ್. ನಗರದ ದೊಡ್ಡಸ್ವಾಮೇ ಗೌಡ, ಉಪಾಧ್ಯಕ್ಷರಾಗಿ ಯಳಂದೂರಿನ ವೈ.ಎನ್. ಜಯರಾಮು ಅವಿರೋಧವಾಗಿ ಆಯ್ಕೆಗೊಂಡರು.
ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣೆಯಲ್ಲಿ ದೊಡ್ಡಸ್ವಾಮೇಗೌಡ ಹಾಗೂ ವೈ.ಎನ್. ಜಯರಾಮು
ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಲವು ಘಟಾನುಘಟಿ ನಾಯಕರುಗಳು ಪೈಪೋಟಿ ನಡೆಸಿದ್ದರು. ಆದರೆ, ಅಂತಿಮವಾಗಿ ಕೆ.ಆರ್. ನಗರ ಶಾಸಕ ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಇದರೊಂದಿಗೆ ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ.
ಒಟ್ಟು 13 ನಿರ್ದೇಶಕ ಸ್ಥಾನದಲ್ಲಿ ಕಾಂಗ್ರೆಸ್ 10, ಜೆಡಿಎಸ್-ಬಿಜೆಪಿ ಮೈತ್ರಿಕೂಟ 3 ನಿರ್ದೇಶಕರನ್ನು ಹೊಂದಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ದೇಶಕರು ಮಾತ್ರ ಹಾಜರಾಗಿದ್ದರು. ಉಪ ವಿಭಾಗಾಧಿಕಾರಿ ಆಶಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂಭ್ರಮದ ಕ್ಷಣಕ್ಕೆ ಶಾಸಕರಾದ ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಎಚ್.ಎಂ.ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ ಸಾಕ್ಷಿಯಾದರು.
ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವದಿಂದ ಕೆಲಕಾಲ ಅಶೋಕ ವೃತ್ತದ ಬಳಿ ಸಂಚಾರ ಅಸ್ತವ್ಯಸ್ತವಾಯಿತು. ಚಾಮರಾಜನಗರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ನಂಜುಂಡಪ್ರಸಾದ್, ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಹಾಗೂ ಇತರರು ಇದ್ದರು. ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಅಭಿನಂದಿಸಿದರು.