ದೊಡ್ಡಮಾರಗೌಡನಹಳ್ಳಿ ಗ್ರಾ ಪಂಗೆ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಅಧ್ಯಕ್ಷೆ ಲತಾ, ಪಿಡಿಒ ಕಂಚಿನಕೆರೆ ರುಕ್ಮಾಂಗದ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ವಿತರಿಸಿದರು.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ಅಧ್ಯಕ್ಷೆ ಲತಾ, ಪಿಡಿಒ ಕಂಚಿನಕೆರೆ ರುಕ್ಮಾಂಗದ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಗಾಂಧಿಗ್ರಾಮ ಪುರಸ್ಕಾರ ವಿತರಣೆ
  • 5 ಲಕ್ಷ ರೂ. ನಗದು, ಸ್ಮರಣಿಕೆ ಒಳಗೊಂಡ ಪುರಸ್ಕಾರ
ಮೈಸೂರು ಮೈಸೂರು ತಾಲೂಕು ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ 2024-25ನೇ ಸಾಲಿನಲ್ಲಿ 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ. ಪುರಸ್ಕಾರವೂ ಸ್ಮರಣಿಕೆ ಮತ್ತು 5 ಲಕ್ಷ ರೂ.ಬಹುಮಾನ ಲಭಿಸಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಕಂಚಿನಕೆರೆ ರುಕ್ಮಾಂಗದ ತಿಳಿಸಿದರು.
ಈ ಹಿಂದೆಯೂ ನಮ್ಮ ಗ್ರಾಪಂ ಗೆ 2013-14ರಲ್ಲಿಯೂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿತ್ತು. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಕಂದಾಯ ಗ್ರಾಮಗಳು, 4 ಜನವಸತಿ ಪ್ರದೇಶಗಳನ್ನು ಒಳಗೊಂಡ ಸುಮಾರು 11 ಸಾವಿರ ಜನಸಂಖ್ಯೆಯನ್ನು ಹೊಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ 12 ಅಂಗನವಾಡಿ ಕೇಂದ್ರಗಳಿದ್ದು ಅವುಗಳಿಗೆ 75 ಸಾವಿರ ರೂ.ಮಿತಿಯಲ್ಲಿ ಮಕ್ಕಳು ಕುಳಿತುಕೊಳ್ಳಲು ಕುರ್ಚಿ ಮತ್ತು ಪೀಠೋಪಕರಣಗಳನ್ನು ಒದಗಿಸಲಾಗಿದೆ. 5 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಪಂನ ಅರಿವು ಕೇಂದ್ರದಲ್ಲಿ ಒಟ್ಟು 750 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. 450ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪುಸ್ತಕಗಳು, 4 ಕಂಪ್ಯೂಟರ್ ಹಾಗೂ ವಾಚನಾಲಯ ಹೊಂದಿದ್ದು, ಪ್ರತಿನಿತ್ಯ 35ರಿಂದ 60 ಪದವಿ ವಿದ್ಯಾರ್ಥಿಗಳು, ಗ್ರಾಮಸ್ಥರು ಅರಿವು ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಅಭಿನಂದಿಸುತ್ತಿದ್ದೇವೆ. ಗ್ರಾಪಂ ವ್ಯಾಪ್ತಿಯಲ್ಲಿ 14 ಓವರ್‌ಹೆಡ್ ಟ್ಯಾಂಕ್‌ಗಳಿದ್ದು, 5 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 12 ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಎಲ್ಲ್ಲ ಗ್ರಾಮಗಳ ಚರಂಡಿ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಪ್ರತಿನಿತ್ಯ ನಿರ್ವಹಿಸಲಾಗುತ್ತಿದೆ. ಪ್ರತಿವರ್ಷ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.
ನಮ್ಮ ಆಯುಷ್ಮಾನ್ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಪ್ರತಿನಿತ್ಯ 40 ರಿಂದ 75 ಜನರು ಪ್ರಯೋಜನ ಪಡೆಯುತ್ತಿದ್ದಾರೆ. 2ನೇ ಬಾರಿಗೆ ನಮ್ಮ ಪಂಚಾಯಿತಿಗೆ ಬಂದ ಗಾಂಧಿಗ್ರಾಮ ಪುರಸ್ಕಾರವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಪಂ ಅಧ್ಯಕ್ಷೆ ಚಿಕ್ಕಮ್ಮ (ಲತಾ) ಅವರೊಂದಿಗೆ ಬೆಂಗಳೂರಿಲ್ಲಿ ಸ್ವೀಕರಿಸಿದ್ದೇವೆ ಎಂದು ತಿಳಿಸಿದರು. 
ಇದು ನಮಗೆ ಸಂತೋಷ ತಂದಿದೆ, ಜತೆಗೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಸಹಕಾರ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಬೆಂಬಲದಿಂದ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಸಹಾಯಕವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net