ಜಿಲ್ಲಾಡಳಿತದಿಂದ ಜೂ.4ರಂದು ರಾಜ್ಯಮಟ್ಟದ ನಾಲ್ವಡಿ ಜಯಂತಿ

 ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕುರಿತು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ನಗರದಲ್ಲಿ ಗುರುವಾರ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದರು. ಡಾ.ಸುದರ್ಶನ್, ಎಸ್.ಎಚ್.ನಿರ್ಮಲಾ, ಪ್ರೊ.ನಂಜರಾಜೇ ಅರಸ್ ಇತರರಿದ್ದರು
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕುರಿತು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ನಗರದಲ್ಲಿ ಗುರುವಾರ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದರು. ಡಾ.ಸುದರ್ಶನ್, ಎಸ್.ಎಚ್.ನಿರ್ಮಲಾ, ಪ್ರೊ.ನಂಜರಾಜೇ ಅರಸ್ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಮಾಹಿತಿ
  • ಪೂರ್ವಭಾವಿ ಸಿದ್ಧತಾ ಸಭೆ
ಮೈಸೂರು: ಜಿಲ್ಲಾಡಳಿತದಿಂದ ಜೂ.4ರಂದು ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಕಲಾಮಂದಿರದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ನಾಲ್ವಡಿ ಅವರು ನಾಡು ಕಂಡ ಅಪ್ರತಿಮವಾದ ಚೇತನ. ನೂರು ವರ್ಷಗಳ ಹಿಂದೆಯೇ ಕೈಗಾರಿಕೆ, ಶಿಕ್ಷಣ, ನೀರಾವರಿ, ಕೃಷಿಗೆ ಅವರು ನೀಡಿದ ಕೊಡುಗೆ ಅಪಾರ. ಅವರು ನೀಡಿದ ಕೊಡುಗೆ ಪ್ರತಿಯೊಬ್ಬರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಮೆರವಣಿಗೆ ಅರಮನೆ ಆವರಣದಲ್ಲಿರುವ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಅಶ್ವರೋಹಿ ದಳ ಹಾಗೂ ಪೊಲೀಸ್ ಬ್ಯಾಂಡ್, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಲಿದೆ  ಎಂದರು.
ಕೆ.ಆರ್.ವೃತ್ತದಲ್ಲಿ ನಾಲ್ವಡಿ ಅವರ ಕುರಿತು ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗುವುದು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ನಾಲ್ವಡಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದರು.
ವಿವಿಧ ಸ್ಪರ್ಧೆಗಳು 7ರಿಂದ 14 ವರ್ಷ ಹಾಗೂ 15ರಿಂದ 18 ವರ್ಷದ ಎರಡು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಕಾರ್ಯಕ್ರಮದ ದಿನದಂದು ಬಹುಮಾನ ವಿತರಿಸಲಾಗುವುದು ಎಂದರು.
ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಕುಡಿಯುವ ನೀರು ಉಪಾಹಾರದ ವ್ಯವಸ್ಥೆಯಾಗಬೇಕು. ಶಿಷ್ಟಾಚಾರದಂತೆ ಎಲ್ಲ ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಣೆಯಾಗಬೇಕು. ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಪೊಲೀಸರಿಗೆ ಸೂಚಿಸಿದರು. 
ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಮುಖ್ಯಸ್ಥರು, ಕಾರ್ಯಕ್ರಮದ ದಿನದಂದು ನಾಲ್ವಡಿ ಅವರ ಬಗ್ಗೆ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿ ಆಯ್ಕೆ ಮಾಡುವ ಬಗ್ಗೆ, ವಿವಿಧ ವೃತ್ತಗಳು ಹಾಗೂ ಶಾಲಾ- ಕಾಲೇಜುಗಳಲ್ಲಿ ನಾಲ್ವಡಿ ಅವರ ಸಾಕ್ಷ್ಯಚಿತ್ರ ಪ್ರದರ್ಶಿಸುವ ಕುರಿತು, ಗ್ರಾಮ ಪಂಚಾಯತಿ ಮಟ್ಟದಲ್ಲಿ ನಾಲ್ವಡಿ ಅವರ ಜಯಂತಿ ಆಚರಿಸುವ ಬಗ್ಗೆ ಚರ್ಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜರಾಜೇ ಅರಸ್, ಕನ್ನಡ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎಸ್. ಕೆ.ರಾಜುಗೌಡ, ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಸೋಸಲೆ ಸಿದ್ದರಾಜು, ಪದ್ಮಪಾಣಿ, ಜಯಶಂಕರ ಮೇಸ್ತ್ರಿ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net