ಕರ್ತವ್ಯ ನಿರ್ವಹಣೆ ವೇಳೆ ಶಿಸ್ತು, ನಿಷ್ಠೆ ಮುಖ್ಯ: ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಸಲಹೆ
ಕಿರಿಯ ಪವರ್ ಮನ್ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಆಯೋಜಿಸಿದ್ದ ಪರಿಚಯಾತ್ಮಕ ತರಬೇತಿ ಕಾರ್ಯಕ್ರಮವನ್ನು ಕೆ.ಎಂ.ಮುನಿಗೋಪಾಲ್ ರಾಜು ಉದ್ಘಾಟಿಸಿದರು. ಯೋಗೇಗೌಡ, ಮೋಹನ್‌ಶಂಕರ್, ಚನ್ನವೀರಯ್ಯ, ಎಂ.ವೈ.ಹೇಮಾ, ರಾಮಚಂದ್ರ, ಅನೀಶ್ ಪಾತಕ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸರ್ಕಾರಿ ಉದ್ಯೋಗ ಸಿಗುವುದು ಕಷ್ಟಕರವಾದ ಇಂದಿನ ದಿನಗಳಲ್ಲಿ ನಿಮಗೆ ದೊರೆತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು
ಪವರ್ ಮನ್‌ಗಳು ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ
ಮೈಸೂರು:ಶಿಸ್ತು, ನಿಷ್ಠೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ನಿಮ್ಮ ಬದುಕಿನಲ್ಲಿ ಪ್ರಗತಿ ಸಾಧ್ಯ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು, ಕಿರಿಯ ಪವರ್‌ಮನ್‌ಗಳಿಗೆ ಸಲಹೆ ನೀಡಿದರು.
ಕಡಕೊಳದ ಕೆಇಬಿಇಎ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ 2026ನೇ ಸಾಲಿನ ಕಿರಿಯ ಪವರ್‌ಮನ್ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಒಂದು ದಿನದ ಪರಿಚಯಾತ್ಮಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಿರಿಯ ಪವರ್ ಮನ್‌ಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ತರಬೇತಿ ನೀಡಲಾಗಿದ್ದು, ರೋಸ್ಟರ್ ಆಧಾರದ ಮೇಲೆ ಎಲ್ಲರಿಗೂ ಉದ್ಯೋಗ ಲಭಿಸಿದೆ. ಶಿಸ್ತುಬದ್ಧ ಮತ್ತು ಪ್ರಾಮಾಣಿಕ ರೀತಿಯಲ್ಲಿ ನೇಮಕಾತಿ ನಡೆದಿದ್ದು, ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅಂಕಗಳಿಗಿಂತ ಶಿಸ್ತು ಮತ್ತು ನಿಷ್ಠೆ ಮುಖ್ಯವಾಗಿದೆ. ಸರ್ಕಾರಿ ಉದ್ಯೋಗ ಸಿಗುವುದು ಕಷ್ಟಕರವಾದ ಇಂದಿನ ದಿನಗಳಲ್ಲಿ ನಿಮಗೆ ದೊರೆತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪವರ್ ಮನ್‌ಗಳು ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶಿಸ್ತಿನಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ತರಬೇತಿ ಹಾಗೂ ಸೇವಾ ಅವಧಿಯಲ್ಲಿ ಶಿಸ್ತು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆಲಸದ ವೇಳೆ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ವಿದ್ಯುತ್ ಅವಘಡಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕರಿಗೆ ನಿರಂತರ ಮತ್ತು ಅಡಚಣೆ ರಹಿತ ವಿದ್ಯುತ್ ಪೂರೈಕೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು.
ನಿವೃತ್ತ ಇಂಜಿನಿಯರ್‌ಗಳಾದ ಯೋಗೇಗೌಡ, ಮೋಹನ್ ಶಂಕರ್, ಚನ್ನವೀರಯ್ಯ, ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ವೈ.ಹೇಮಾ, ಎಇಇಗಳಾದ ರಾಮಚಂದ್ರ, ಅನೀಶ್ ಪಾತಕ್ ಇತರರು ಇದ್ದರು.