ಜನರ ಅನುಕೂಲಕ್ಕಾಗಿ ಡಿಜಿಟಲ್ ಸೇವೆ ಅಭಿವೃದ್ಧಿ

ಯದುವೀರ್
ಯದುವೀರ್
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಯದುವೀರ್ ಪ್ರಶ್ನೆಗೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಉತ್ತರ

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ.

ಎಐ ಬಳಕೆಯ ಉದ್ದೇಶ, ಜಾರಿಗೆ ತರಲಿರುವ ಯೋಜನೆಗಳು, ಫಲಾನುಭವಿಗಳ ವೈಯಕ್ತಿಕ ಮಾಹಿತಿಯ ಸುರಕ್ಷತೆ, ತಾರತಮ್ಯ ತಡೆಗಟ್ಟುವ ಕ್ರಮಗಳು ಹಾಗೂ ಸ್ವತಂತ್ರ ಪರಿಶೀಲನಾ ವ್ಯವಸ್ಥೆ ಕುರಿತು ಸರ್ಕಾರದಿಂದ ಮಾಹಿತಿ ಕೋರಿದ್ದರು.
ಇದಕ್ಕೆ ಉತ್ತರಿಸಿರುವ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ, ಭಾರತ ಎಐ(ಇಂಡಿಯಾಎಐ) ಮಿಷನ್‌ನಡಿ ದೇಶೀಯ ಎಐ ಸಂಸ್ಥೆಗಳ ಸಹಯೋಗದೊಂದಿಗೆ ಡಿಜಿಟಲ್ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಎಐ ತಂತ್ರಜ್ಞಾನ ಬಳಕೆಯನ್ನು ಪರಿಶೀಲಿಸಲಾಗುತ್ತಿದೆ. ಜನರಿಗೆ ಸುಲಭವಾಗಿ ಸೇವೆ ದೊರಕುವ ಉದ್ದೇಶದಿಂದ ಬಹುಭಾಷಾ ಎಐ ಚಾಟ್‌ಬಾಟ್, ವರ್ಚುವಲ್ ಸಹಾಯಕ ವ್ಯವಸ್ಥೆ ಹಾಗೂ ಹಜ್ ಸುವಿಧಾ ಆಪ್ ಸೇರಿದಂತೆ ಹಲವು ಡಿಜಿಟಲ್ ಸೇವೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದೆ.
ಭಾರತ ಎಐ ಮಿಷನ್ ಸುರಕ್ಷಿತ, ಜವಾಬ್ದಾರಿಯುತ ಹಾಗೂ ಸಮಗ್ರ ಕೃತಕ ಬುದ್ಧಿಮತ್ತೆ ವ್ಯವಸ್ಥೆ ರೂಪಿಸುವ ಗುರಿ ಹೊಂದಿದ್ದು, ಕಂಪ್ಯೂಟಿಂಗ್ ಮೂಲಸೌಕರ್ಯ, ಎಐ ಮಾದರಿಗಳ ಅಭಿವೃದ್ಧಿ, ಅನ್ವಯಿಕೆಗಳು, ದತ್ತಾಂಶ ಸಂಗ್ರಹ, ಕೌಶಲಾಭಿವೃದ್ಧಿ, ನವೋದ್ಯಮಗಳಿಗೆ ಉತ್ತೇಜನ ಹಾಗೂ ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐ ವ್ಯವಸ್ಥೆ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ ಎಂದು ಉತ್ತರದಲ್ಲಿ ವಿವರಿಸಲಾಗಿದೆ.
ಎಐ ಬಳಕೆಯಲ್ಲಿ ವೈಯಕ್ತಿಕ ಮಾಹಿತಿಯ ಗೌಪ್ಯತೆ, ದತ್ತಾಂಶ ಸುರಕ್ಷತೆ ಹಾಗೂ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ 2023ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಯಿಂದ ಸರ್ಕಾರದ ಸೇವೆಗಳು ಇನ್ನಷ್ಟು ಪಾರದರ್ಶಕ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಲಿವೆ. ತಂತ್ರಜ್ಞಾನ ಅಭಿವೃದ್ಧಿ ಜತೆಗೆ ನಾಗರಿಕರ ಹಕ್ಕುಗಳು ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನೂ ಸಮಾನವಾಗಿ ಕಾಪಾಡುವುದು ಅತ್ಯಂತ ಮುಖ್ಯ. ತಂತ್ರಜ್ಞಾನ ಆಧಾರಿತ ಉತ್ತಮ ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ಗುಣಮಟ್ಟ ಹೆಚ್ಚಿಸುವ ವಿಷಯಗಳಿಗೆ ಮುಂದೆಯೂ ಸಂಸತ್‌ನಲ್ಲಿ ಆದ್ಯತೆ ನೀಡುವುದಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net