ಗ್ರಾಹಕರಿಂದ ಚಿನ್ನ ಪಡೆದು ಮೈಸೂರಿನ ಧನಗಣಪತಿ ಫೈನಾನ್ಸ್‌ನಿಂದ ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ನಗರದ ಧನಗಣಪತಿ ಫೈನಾನ್ಸ್ ಕೊಡಗು ಜಿಲ್ಲೆಯ ವ್ಯಕ್ತಿಯೊಬ್ಬರಿಂದ ಚಿನ್ನ ಪಡೆದು ಹಿಂತಿರುಗಿಸದೆ ವಂಚಿಸಿರುವ ಕುರಿತು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಾಜಪೇಟೆ ತಾಲೂಕಿನ ಅಮ್ಮತಿ ಕಾರ್ಮಾಡು ನಿವಾಸಿ ಗೌರಮ್ಮ ಎಂಬವರೇ ವಂಚನೆಗೆ ಒಳಗಾದವರು. ಗೌರಮ್ಮ ಕೊಡಗು ಜಿಲ್ಲೆಯ ಬ್ಯಾಂಕ್‌ವೊಂದರಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದರು. ಈ ಸಾಲವನ್ನು ಮರು ಪಾವತಿಸುವ ಉದ್ದೇಶದಿಂದ ಧನಗಣಪತಿ ಫೈನಾನ್ಸ್ ಅವರನ್ನು ಸಂಪರ್ಕಿಸಿದರು. ನಂತರ ಫೈನಾನ್ಸ್‌ನವರು ಬ್ಯಾಂಕ್‌ಗೆ 17 ಲಕ್ಷ ರೂ. ಪಾವತಿ ಮಾಡಿ ಬ್ಯಾಂಕ್‌ನಿಂದ ಚಿನ್ನಾಭರಣ ಬಿಡಿಸಿಕೊಂಡರು. ಚಿನ್ನಾಭರಣದ ಒಟ್ಟು ತೂಕ 306 ಗ್ರಾಂ ಇತ್ತು.
ನಂತರ ಗೌರಮ್ಮ ಅವರು 15 ಲಕ್ಷ ರೂ.ಗಳನ್ನು ಬ್ಯಾಂಕ್ ಮೂಲಕ ಸಾಲ ಮರು ಪಾವತಿ ಮಾಡಿ ಉಳಿಕೆ ಹಣವನ್ನು ನೇರವಾಗಿ ಧನಗಣಪತಿ ಫೈನಾನ್ಸ್‌ಗೆ ನೀಡಿ ಚಿನ್ನಾಭರಣ ಬಿಡಿಸಿಕೊಳ್ಳಲು ತೆರಳಿದ ಸಂದರ್ಭ ಇವರಿಗೆ 69.910 ಗ್ರಾಂ 4 ಚಿನ್ನದ ಬಳೆಗಳನ್ನು ನೀಡಿ ದರು. ಆದರೆ, ತೂಕ ಮಾಡಿದಾಗ ಕೇವಲ 67.910 ಗ್ರಾಂ ಮಾತ್ರ ಇತ್ತು. ಆದರೆ, ಅದು ಶುದ್ಧ ಚಿನ್ನವಾಗಿರಲಿಲ್ಲ. ನಂತರ ಮತ್ತೊಮ್ಮೆ ಭೇಟಿಯಾದಾಗ 5 ಗ್ರಾಂ.ನ ಒಂದು ಉಂಗುರ ನೀಡಿದರು. ಈ ರೀತಿ ಒಟ್ಟು 106 ಗ್ರಾಂ ಚಿನ್ನವನ್ನು ಗೌರಮ್ಮ ಅವರಿಗೆ ನೀಡಲಾಗಿದ್ದು, 206 ಗ್ರಾಂ ಚಿನ್ನ ನೀಡಲು ಬಾಕಿ ಇದೆ. ನಮ್ಮಿಂದ ಚಿನ್ನ ಪಡೆದು ಮೋಸ ಮಾಡಿದ್ದಾರೆ ಎಂದು ಗೌರಮ್ಮ ಮಂಗಳವಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net