ಆನಗಟ್ಟಿ-ರಾಮೇನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ

ಎಚ್.ಡಿ.ಕೋಟೆ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಂಡರು.
ಎಚ್.ಡಿ.ಕೋಟೆ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು ಭರವಸೆ
  • ಜನಸ್ಪಂದನಾ ಕಾರ್ಯಕ್ರಮ
ಎಚ್.ಡಿ.ಕೋಟೆ : ಆನಗಟ್ಟಿಯಿಂದ ರಾಮೇನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲು ನಾಲ್ಕು ಕೋಟಿ ರೂ. ಹಣ ಬಿಡುಗಡೆ ಮಾಡಿಸಿ, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಬೀಚನಹಳ್ಳಿ ಗ್ರಾಮ ಪಂಚಾಯಿತಿಯ ರಾಮೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ 143 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದರು.
ನಾನು ಶಾಸಕನಾಗಿ ಬಂದ ಬಳಿಕ ರಾಮೇನಹಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. 33 ಲಕ್ಷ ರೂ. ವೆಚ್ಚದಲ್ಲಿ ಮೂರು ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಗ್ರಾಮಕ್ಕೆ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭವನಗಳ ನಿರ್ಮಾಣಕ್ಕೆ ಉಳಿಕೆ ಹಣ ಮಂಜೂರು ಮಾಡಲಾಗಿತ್ತು, ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಮುಂದಿನ ದಿನಗಳಲ್ಲಿ ಕಾಮಗಾರಿ ಸಂಪೂರ್ಣಗೊಳಿಸಲು ಹಣ ಮಂಜೂರು ಮಾಡಲಾಗುವುದು ಎಂದರು.
ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದಿಂದ ಮುಳುಗಡೆಯಾಗಿ ಪುನರ್ವಸತಿ ಗ್ರಾಮವಾಗಿ ರಾಮೇನಹಳ್ಳಿ ಸ್ಥಾಪನೆಯಾದ ಬಳಿಕ ಇಲ್ಲಿ ನೆಲೆಸಿದ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು. ಗ್ರಾಮಸ್ಥರಿಂದ ಬಂದ ಮನವಿಗಳನ್ನು ಆಯಾ ಇಲಾಖೆಗೆ ಪರಿಹರಿಸುವಂತೆ ವರ್ಗಾಯಿಸಲಾಗಿದೆ, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗಳು ಬಗೆಹರಿಯದಿದ್ದರೆ, ಆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಗ್ರಾಮಸ್ಥರಿಂದ ಮನವಿಗಳ ಸುರಿಮಳೆ : ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಆನಗಟ್ಟಿಯಿಂದ ರಾಮೇನಹಳ್ಳಿಯವರೆಗೆ ಡಾಂಬರೀಕರಣದ ಅವಶ್ಯಕತೆ ಇದೆ, ಅಲ್ಲದೇ ವಾಲ್ಮೀಕಿ ಭವನ ಅರ್ಧದಷ್ಟು ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಗ್ರಾಮದ ಸಮೀಪದಲ್ಲಿ ರಾಮೇನಹಳ್ಳಿ ಹಾಡಿ ಇದ್ದು ಇಲ್ಲಿ ಸಿಮೆಂಟ್ ರಸ್ತೆಯ ಅಗತ್ಯವಿದೆ, ಗ್ರಾಮಕ್ಕೆ ಒಂದು ರಂಗಮಂದಿರ ಬೇಕು. ಶಾಲೆಯಲ್ಲಿ ಮಕ್ಕಳು ಕುಳಿತು ಊಟ ಮಾಡಲು ಸ್ಥಳವಕಾಶದ ಕೊರತೆ ಇದ್ದು, ಊಟದ ಕೊಠಡಿಯನ್ನು ನಿರ್ಮಿಸಿಕೊಡಬೇಕು, ಅಂಬೇಡ್ಕರ್ ಭವನಕ್ಕೆ ಕಾಂಪೌಂಡ್ ನಿರ್ಮಾಣ, ಗ್ರಾಮದ ಸರ್ವೇ ನಂ 162 ರಲ್ಲಿ 200 ಎಕರೆ ದುರಸ್ತಿಯಾಗಿಲ್ಲ, ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಳೆ ಹೊಸೂರು, ಬೀಚನಹಳ್ಳಿ, ಗಣೇಶನಗುಡಿ, ನೇರಳೆ, ಸುಣ್ಣಕಲ್ಲುಮುಂಟಿ ಮತ್ತು ಮಾಗುಡಿಲು ಗ್ರಾಮಗಳಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ನಾಗನಾಯಕ, ಉಪಾಧ್ಯಕ್ಷ ಬಸವರಾಜನಾಯಕ, ಸದಸ್ಯರಾದ ಭಾಸ್ಕರ್, ಸುಬ್ರಮಣಿ, ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯಿತಿ ಇಒ ಧರಣೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ. ಪ್ರಸಾದ್, ಬಿಇಒ ರಾಜು, ಅಬಕಾರಿ ಇನ್‌ಸ್ಪೆಕ್ಟರ್ ಶಿವರಾಜು, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ರಮೇಶ್, ಪರಿಶಿಷ್ಟ ವರ್ಗಗಳ ಇಲಾಖೆಯ ಮಹೇಶ್, ಹಿಂದುಳಿದ ವರ್ಗಗಳ ಇಲಾಖೆಯ ಶಶಿಕಲಾ, ನೀರಾವರಿ ಇಲಾಖೆಯ ಎಇಇಗಳಾದ ಗಣೇಶ್, ನಟಶೇಖರಮೂರ್ತಿ, ಕಾರ್ಮಿಕ ನಿರೀಕ್ಷಕಿ ಪಿ.ಹರ್ಷಿತಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಾದೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ, ಪಿಡಿಒ ಚನ್ನಪ್ಪ, ಸಿಡಿಪಿಒ ದೀಪಾ, ರೇಣುಕಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net