ಹೊಸರೂಪದೊಂದಿಗೆ ಅರಸು ಪ್ರತಿಮೆ ಅನಾವರಣ

ಗುರುವಾರ ಅನಾವರಣಗೊಂಡಿರುವ ಡಿ.ದೇವರಾಜ ಅರಸು ಪ್ರತಿಮೆ
ಗುರುವಾರ ಅನಾವರಣಗೊಂಡಿರುವ ಡಿ.ದೇವರಾಜ ಅರಸು ಪ್ರತಿಮೆ
Published on

ಪ್ರಮುಖ ಮುಖ್ಯಾಂಶಗಳು

  • ಕಂಚಿನ ಪ್ರತಿಮೆ ಸಿದ್ಧಪಡಿಸಿದ ಶಿಲ್ಪಿ ಅರುಣ್ ಯೋಗಿರಾಜ್
ಮೈಸೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ನೂತನ ಪ್ರತಿಮೆ ಹೊಸರೂಪದೊಂದಿಗೆ ಗುರುವಾರ ನಗರದಲ್ಲಿ ಅನಾವರಣಗೊಂಡಿದೆ.
ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಒಳಗೊಂಡ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಕಳೆದ 2025ರ ನವೆಂಬರ್ 3ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. 
ಆದರೆ, ಪ್ರತಿಮೆ ಮುಖ ಚಹರೆಯ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು, ‘ಆ ಪ್ರತಿಮೆಯು ದೇವರಾಜ ಅರಸು ಅವರ ಮುಖವನ್ನು ಹೋಲುವುದಿಲ್ಲ. ಅವರ ವ್ಯಕ್ತಿತ್ವವನ್ನು ಸಹ ಬಿಂಬಿಸುತ್ತಿಲ್ಲ’ ಎಂದು ಅವರ ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. 
ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆ ಬಂದಿತ್ತು. 
ಹೀಗಾಗಿ, ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತವು ಪ್ರತಿಮೆ ಬದಲಿಸುವ ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ಪ್ರತಿಮೆ ಮಾಡಿಕೊಡುವಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಅವರ ಕೈಚಳಕದಲ್ಲಿ ಸುಂದರವಾದ ಹಾಗೂ ನೈಜ ಹೋಲಿಕೆಯುಳ್ಳ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸಲಾಗಿದ್ದು, ಇದೀಗ ಇದು ಪ್ರತಿಷ್ಠಾಪನೆಗೊಂಡಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಶಿಲ್ಪಿ ಅರುಣ್ ಯೋಗಿರಾಜ್ ಇದ್ದರು.
"

ಕೃಷ್ಣ ಶಿಲೆಯಲ್ಲಿ ಪ್ರತಿಮೆಯನ್ನು ಕೆತ್ತಲಾಗಿದ್ದು, ಅರಸು ಕುರಿತು ಅಧ್ಯಯನ ಮಾಡಿ ಅವರ ಹಳೇ ಫೋಟೋ ಗಮನಿಸಿ ಇದನ್ನು ಸಿದ್ಧಪಡಿಸಲು ಆರು ತಿಂಗಳ ಕಾಲ ತೆಗೆದುಕೊಳ್ಳಲಾಗಿದೆ. ದೇವರ ಮೂರ್ತಿಗಿಂತ ವ್ಯಕ್ತಿಯ ಪ್ರತಿಮೆಯನ್ನು ಕಲ್ಲಿನಲ್ಲಿ ರಚನೆ ಬಹಳಷ್ಟು ಸವಾಲು, ಕಠಿಣವಾಗಿರುತ್ತದೆ.

— ಶಿಲ್ಪಿ ಅರುಣ್ ಯೋಗಿರಾಜ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net