ಮೈಸೂರು: ಕಲೆಯು ಮನುಷ್ಯನ ಅಂತರಂಗವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಮ.ಗು.ಸದಾನಂದಯ್ಯ ಹೇಳಿದರು.
ನಗರದ ರಂಗಾಯಣದ ಅಂಗಳದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ರ್ದೇಶನಾಲಯದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರಂಗ ಮತ್ತು ನೃತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೊಬೈಲ್‌ಅನ್ನು ಸಂಗಾತಿ ಮಾಡಿಕೊಂಡಿದ್ದೇವೆ. ಈ ಯಾಂತ್ರಿಕತೆಯಿಂದ ಯಾವುದರಲ್ಲಿಯೂ ಜೀವಂತಿಕೆ ಮತ್ತು ವಿಕಸನವನ್ನು ಕಾಣದ ದುರಂತ ಬಂದೋದಾಗಿದೆ. ಇದಕ್ಕೆಲ್ಲ ಕಲೆಯಲ್ಲಿ ಉತ್ತರ ಇದೆ ಎಂದರು.
ರಾಜಕೀಯ, ಧಾರ್ಮಿಕ, ಶೈಕ್ಷಣಿಕ ವಲಯ ವ್ಯಾಪಾರೀಕರಣದಿಂದ ಕಲುಷಿತಗೊಂಡಿರುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜವನ್ನು ಸುಸ್ಥಿತಿಯಲ್ಲಿ ಕರೆದ್ಯೊಯಲು ಸಂಗೀತ, ನೃತ್ಯ, ನಾಟಕ ಬದುಕಿಗೆ ಮೌಲ್ಯಗಳನ್ನು ಮತ್ತು ಸುಮಾರ್ಗವನ್ನು ತೋರಿಸಲಿವೆ ಎಂದರು.
ಸರ್ಕಾರಗಳು ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳೆಸುತ್ತೇವೆ ಎನ್ನುವುದು ಕೇವಲ ಮಾತುಗಳಿಗೆ ಸೀಮಿತವಾಗಿದೆ. ಸಂಘ-ಸಂಸ್ಥೆಗಳೇ ಸರ್ಕಾರಕ್ಕಿಂತ ಹೆಚ್ಚು ಇವುಗಳನ್ನು ಉಳಿಸಿಕೊಂಡು ಬರುತ್ತಿವೆ ಎಂದರು.
ಇದೇ ವೇಳೆ ಶಿಬಿರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಂಸಾಳೆ, ಡೊಳ್ಳು ಕುಣಿತವನ್ನು ಪ್ರದರ್ಶಿಸಿದರು. ಸೋಬಾನೆ ಕಲಾವಿದರಾದ ಹೊರೆಯಾಲದ ಮಹಾದೇವಮ್ಮ ಮತ್ತು ರಾಮಸಮುದ್ರದ ಮಹಾದೇವಮ್ಮ ಮತ್ತು ತಂಡದವರನ್ನು ಸನ್ಮಾನಿಸಲಾಯಿತು. ಮಹಾರಾಜ ಕಾಲೇಜಿನ ಜನಪದ ವಿಭಾಗದ ಪ್ರಾಧ್ಯಾಪಕಿ ಪ್ರೊ.ವಿಜಯಲಕ್ಷ್ಮಿ ಮನಾಪುರ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನ ಕೃಷ್ಣಜನಮನ, ದಿನಮಣಿ ಇದ್ದರು.