ಬೇಡಿಕೆ ಇದ್ದರೂ ಅಂಗಾಂಗಗಳ ದಾನ ಪ್ರಮಾಣ ಕಡಿಮೆ:ಡಾ.ಕಿರಣ್ ಎಂ.ನಾಯ್ಕ
ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಧಾತೃ’ ಕಾರ್ಯಕ್ರಮದಲ್ಲಿ ಡಾ.ಕಿರಣ್ ಎಂ.ನಾಯ್ಕ, ಡಾ.ಪರಶುರಾಮ್, ಡಾ.ಹನುಮಂತಾಚಾರ್ ಜೋಶಿ, ದಿನೇಶ್, ನರಸಿಂಹ, ಚಂದ್ರಶೇಖರ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಔಷಧಗಳ ಅಡ್ಡ ಪರಿಣಾಮಗಳು ಮತ್ತು ರೋಗಗಳಿಂದ ಯಕೃತ್, ಮೂತ್ರಪಿಂಡ ಸೇರಿದಂತೆ ದೇಹದ ಅಂಗಗಳು ಕೆಲವೊಮ್ಮೆ ಹಾನಿಗೊಳಗಾಗುತ್ತವೆ
ಭಾರತೀಯರು ಅಂಗಾಂಗ, ಸತ್ತ ಬಳಿಕ ದೇಹದಾನ ಮಾಡಲು ಮುಂದೆ ಬರುತ್ತಿಲ್ಲ
ಒಬ್ಬ ವ್ಯಕ್ತಿಯು ತನ್ನ ಮರಣ ನಂತರ ಈ ಅಂಗಾಂಗಗಳನ್ನು ದಾನ ಮಾಡುವುದರಿಂದ ಎಂಟು ಜನರ ಜೀವ ಉಳಿಸಬಹುದು
ಮೈಸೂರು:ಅಂಗಾಂಗ ದಾನಕ್ಕೆ ಬೇಡಿಕೆ ಅತಿಯಾಗಿದ್ದರೂ ಭಾರತದಲ್ಲಿ ಅಂಗಾಂಗಗಳ ದಾನ ತುಂಬ ಕಡಿಮೆ ಪ್ರಮಾಣದಲ್ಲಿದೆ ಎಂದು ನಗರದ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಕಿರಣ್ ಎಂ.ನಾಯ್ಕ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿದ್ದ ದೇಹದಾನ, ಅಂಗಾಂಗದ ಮಹತ್ವ ಕುರಿತು ಅರಿವು ಮೂಡಿಸುವ ‘ಧಾತೃ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವಾರು ಔಷಧಗಳ ಅಡ್ಡ ಪರಿಣಾಮಗಳು ಮತ್ತು ರೋಗಗಳಿಂದ ಯಕೃತ್, ಮೂತ್ರಪಿಂಡ ಸೇರಿದಂತೆ ದೇಹದ ಅಂಗಗಳು ಕೆಲವೊಮ್ಮೆ ಹಾನಿಗೊಳಗಾಗುತ್ತವೆ. ಇಂತಹ ಸಂದರ್ಭದಲ್ಲಿ ಸಾಯುವ ಸ್ಥಿತಿಯಲ್ಲಿರುವ ವ್ಯಕ್ತಿಯ ಅಂಗಾಂಗಗಳು ಬೇರೆಯವರಿಗೆ ಉಪಯೋಗಕ್ಕೆ ಬರುತ್ತವೆ ಎಂದರು.
ಆದರೆ ಭಾರತೀಯರು ಅಂಗಾಂಗ, ಸತ್ತ ಬಳಿಕ ದೇಹದಾನ ಮಾಡಲು ಮುಂದೆ ಬರುತ್ತಿಲ್ಲ. ಪರಿಣಾಮ ಸುಮಾರು ಸಾವು ನೋವುಗಳು ಉಂಟಾಗುತ್ತಿವೆ. ಆದ್ದರಿಂದ ಒಬ್ಬ ವ್ಯಕ್ತಿಯು ತನ್ನ ಮರಣ ನಂತರ ಈ ಅಂಗಾಂಗಗಳನ್ನು ದಾನ ಮಾಡುವುದರಿಂದ ಎಂಟು ಜನರ ಜೀವ ಉಳಿಸಬಹುದು ಎಂದು ತಿಳಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪರಶುರಾಮ್ ಮಾತನಾಡಿ, ಪ್ರತಿಯೊಬ್ಬರೂ ಸಮಾಜಕ್ಕೋಸ್ಕರ ತಮ್ಮ ದೇಹವನ್ನು ಮತ್ತು ಅಂಗಗಳನ್ನು ದಾನ ಮಾಡಬೇಕು. ಅದಕ್ಕೋಸ್ಕರ ಪ್ರಮಾಣವನ್ನು ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಅವರು, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಜತೆಗೂಡಿ ಮಾಡುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪಾಲಕರು ಅಂಗ ಮತ್ತು ಮರಣೋತ್ತರ ದೇಹದಾನವನ್ನು ಮಾಡುವುದಾಗಿ ಪ್ರಮಾಣ ಮಾಡುವುದು ಸಮಾಜಕ್ಕೆ ಮತ್ತು ದೇಶಕ್ಕೆ ತುಂಬ ಅವಶ್ಯವಾಗಿದೆ ಎಂದು ತಿಳಿಸಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ದಿನೇಶ್, ಆಡಳಿತ ಮಂಡಳಿ ಸದಸ್ಯರಾದ ನರಸಿಂಹ, ಚಂದ್ರಶೇಖರ್ ಇದ್ದರು.