ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭಿಸಲು ಆಗ್ರಹ

ಮೈಸೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸಫಾರಿ ಪುನರಾರಂಭಿಸಲು ಆಗ್ರಹಿಸಿದರು.
ಮೈಸೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸಫಾರಿ ಪುನರಾರಂಭಿಸಲು ಆಗ್ರಹಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಫಾರಿ ಸ್ಥಗಿತದಿಂದ ಹಲವರಿಗೆ ಉದ್ಯೋಗ ನಷ್ಟದ ಭೀತಿ
  • ವಿದೇಶಿ ಪ್ರವಾಸಿಗರು ಆಗಮಿಸುವ ಸಾಧ್ಯತೆ ಕಡಿಮೆ
ಮೈಸೂರು: ಕಬಿನಿ, ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಜಂಗಲ್ ಸಫಾರಿ ಪುನರಾರಂಭಿಸಬೇಕು ಎಂದು ಮೈಸೂರು ಟ್ರಾವಲ್ಸ್ ಅಸೋಸಿಯೇಷನ್, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು, ಹೋಟೆಲ್ ಮಾಲೀಕರ ಸಂಘ ಹಾಗೂ ಸಫಾರಿ ಅವಲಂಬಿತರಾದ ವಾಹನ ಚಾಲಕರು, ರೈತರು, ಸಣ್ಣ ವ್ಯಾಪಾರಿಗಳು, ಕಲಾವಿದರು ಒತ್ತಾಯಿಸಿದ್ದಾರೆ.
ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಬಿ.ಎಸ್.ಪ್ರಶಾಂತ್ ಮಾತನಾಡಿ, ಜಂಗಲ್ ಸಫಾರಿ ಹಾಗೂ ಸಂಬಂಧಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಇತ್ತೀಚಿನ ತೀರ್ಮಾನವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಪಾರ ಹಾನಿಯನ್ನುಂಟುಮಾಡಿದೆ. ಬೇಸಿಗೆ ಅವಧಿಯಲ್ಲಿ ನೀರಿನ ಅಭಾವ, ತೀವ್ರ ಬಿಸಿಲು ಮತ್ತು ಕಾಡ್ಗಿಚ್ಚಿನ ಅಪಾಯದ ಹಿನ್ನೆಲೆಯಲ್ಲಿ ಕೆಲವೊಂದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಆದರೆ, ಪ್ರವಾಸೋದ್ಯಮಕ್ಕೆ ಅತೀ ಪ್ರಮುಖ ಹಾಗೂ ಲಾಭದಾಯಕವಾಗಿರುವ ಚಳಿಗಾಲದ ಸಮಯದಲ್ಲಿಯೇ ಸಫಾರಿಗೆ ಸಂಪೂರ್ಣ ನಿಷೇಧ ವಿಧಿಸಿರುವುದು ಸರಿಯಲ್ಲ ಎಂದರು.
ಹಲವಾರು ವಿದೇಶಿಗರು ಸಫಾರಿಗೆಂದೇ ಇಲ್ಲಿಗೆ ಬರುತ್ತಾರೆ. ಕೆಲವು ವಿದೇಶಿ ಪ್ರವಾಸಿಗರು ಈಗಾಗಲೇ ಭಾರತಕ್ಕೆ ಬಂದು ಮುಂದಿನ ದಿನಗಳಲ್ಲಿ ಬಂಡೀಪುರ, ಕಬಿನಿ, ನಾಗರಹೊಳೆಗೆ ಬರಲಿದ್ದಾರೆ. ಅವರ ಇಡೀ ಪ್ರವಾಸ ಇದರ ಮೇಲೆ ಆಯೋಜನೆಯಾಗಿರುತ್ತದೆ. ಈಗ ಇದ್ದಕ್ಕಿದ್ದಂತೆ ಸಫಾರಿ ರದ್ದುಗೊಳಿಸಿದರೆ ಅವರ ಇಡೀ ಪ್ರಯಾಣ ತಲೆಕೆಳಗಾಗುತ್ತದೆ. ಅವರು ಬುಕ್ ಮಾಡಿರುವ ಹೋಟೆಲ್‌ಗಳು, ಪ್ರವಾಸಿ ಮಾರ್ಗದರ್ಶಕರು, ರೆಸಾರ್ಟ್‌ಗಳು ಎಲ್ಲರಿಗೂ ತೀವ್ರ ನಷ್ಟ ಆಗುತ್ತಿದೆ ಎಂದು ಹೇಳಿದರು.
ಜಂಗಲ್ ಸಫಾರಿ ಪ್ರವಾಸೋದ್ಯಮದ ಅತ್ಯಂತ ಅಮೂಲ್ಯ ಹಾಗೂ ಪ್ರವಾಸಿ ಸ್ನೇಹಿ ಉದ್ಯೋಗಗಳಲ್ಲಿ ಒಂದಾಗಿದ್ದು, ಚಾಲಕರು, ಮಾರ್ಗದರ್ಶಕರು, ಬುಕ್ಕಿಂಗ್ ಸಿಬ್ಬಂದಿ, ಜೀಪ್ ಮಾಲೀಕರು ಹಾಗೂ ಅನೇಕ ನೆಲಮಟ್ಟದ ಕಾರ್ಮಿಕರು ಈ ಕ್ಷೇತ್ರದ ಆದಾಯದ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಅವರ ಜೀವನೋಪಾಯ ಸಂಪೂರ್ಣವಾಗಿ ಸ್ಥಗಿತಗೊಂಡಂತಾಗಿದೆ. ಹಾಗಾಗಿ ಕೂಡಲೇ ಜಂಗಲ್ ಸಫಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಸಿ.ನಾರಾಯಣಗೌಡ, ಸಿ.ಎ.ಜಯಕುಮಾರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net