ಈ ವೇಳೆ ಮಾತನಾಡಿದ ಸೇನೆಯ ಕಾರ್ಯಾಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್, ರೈತರ ಮತ್ತು ಶೋಷಿತ ಸಮಾಜದ ಮಾತೃಸಂಸ್ಥೆ ಎನಿಸಿಕೊಂಡಿರುವ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆ ಸಿಗುವುದು ದುರ್ಲಬವಾಗಿದೆ. ಪೌತಿ ಖಾತೆ ಮಾಡಿಕೊಡುವ, ಪೌತಿ ಖಾತೆಯಲ್ಲಿ ಮರಣ ಹೊಂದಿದವರ ಹೆಸರು ತೆಗೆದು ಹಾಕುವ, ಜಮೀನಿಗೆ ರಸ್ತೆ ಬಿಡಿಸಿಕೊಡುವ, ಉಪವಿಭಾಗ ವ್ಯಾಪ್ತಿಯಲ್ಲಿ ಮೈಕ್ರೋಫೈನಾನ್ಸ್ ಹಾವಳಿ ಇವೇ ಮುಂತಾದವುಗಳ ಕುರಿತು ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕಿನಲ್ಲಿ ಅರ್ಜಿಗಳು ರಾಶಿ ಬಿದ್ದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ. ಉಪವಿಭಾಗ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಉಪ ವಿಭಾಗಾಧಿಕಾರಿ ಅವರು ಕುಂದುಕೊರತೆ ಸಭೆ ಆಯೋಜಿಸಿದಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ.ಆದರೆ ಅದು ಆಗುತ್ತಿಲ್ಲ. ಗ್ರಾ.ಪಂ.ಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ದಲ್ಲಾಳಿಗಳಂತೆ ವರ್ತಿಸುತ್ತಿದಾರೆ. ಉಪವಿಭಾಗ ಮಟ್ಟದ ಇಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವರೆಗೂ ಧರಣಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.