ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲುೃಆರ್‌ಸಿ) ನೀಡಿರುವ ಆದೇಶ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಟಗಳ್ಳಿ ಮಹೇಶ್, ಮಹೇಂದ್ರ, ಮಹೇಶ್, ರಘು, ಕುಮಾರ್, ಪ್ರಕಾಶ್, ಬಸಪ್ಪ, ನಾಗನಹಳ್ಳಿ ಚಂದ್ರಶೇಖರ್ ಇದ್ದರು.
ತಮಿಳುನಾಡಿಗೆ 15 ದಿನ ಪ್ರತಿನಿತ್ಯ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲುೃಆರ್‌ಸಿ) ನೀಡಿರುವ ಆದೇಶ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕಾಡಾ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಜಲಾಶಯಗಳು ಸಂಪೂರ್ಣ ಭರ್ತಿಯಾಗಿಲ್ಲ. ಕೆಲ ದಿನಗಳಿಂದ ಬೀಳುತ್ತಿದ್ದ ಮಳೆಯೂ ಕಡಿಮೆಯಾಗಿದೆ. ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಿದರೆ 15 ಟಿಎಂಸಿ ನೀರು ಖಾಲಿಯಾಗಿ ಜಲಾಶಯಗಳು ಬರಿದಾಗುತ್ತವೆ. ಇದರಿಂದ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಸರ್ಕಾರ ಸಿಡಬ್ಲುೃಆರ್‌ಸಿ ಆದೇಶ ಪಾಲಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಲಾಶಯಗಳಲ್ಲಿರುವ ನೀರನ್ನು ಕುಡಿಯಲು ಹಾಗೂ ಕೆರೆ ತುಂಬಿಸಲು ಆದ್ಯತೆ ಮೇರೆಗೆ ಬಳಸಬೇಕು. ಸರ್ಕಾರ ತಕ್ಷಣವೇ ಸಭೆ ಕರೆದು ಬೆಳೆ ಹಾಕುವ ಕುರಿತು ರೈತರಿಗೆ ಸ್ಪಷ್ಟ ಮಾರ್ಗದರ್ಶನ ನೀಡಬೇಕು. ಬೆಳೆ ಬೆಳೆಯದಂತೆ ಸೂಚಿಸಿದರೆ ತಕ್ಷಣ ಪರಿಹಾರ ಘೋಷಿಸಬೇಕು.
ಸರ್ವಪಕ್ಷ ಸಭೆಯ ತೀರ್ಮಾನದಂತೆ ರಾಜ್ಯದ ರೈತರು, ಜಾನುವಾರುಗಳು ಹಾಗೂ ಬೆಂಗಳೂರು, ಮೈಸೂರು ನಗರಗಳ ಕುಡಿಯುವ ನೀರಿನ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಆ.13ರಂದು ಕರೆ ನೀಡಿರುವ ಕರ್ನಾಟಕ ಬಂದ್ ಕರೆಗೆ ಸಂಪೂರ್ಣ ಬೆಂಬಲ ಇದೆ ಎಂದರು.