ಭಾರತದ ಉದ್ದಗಲಕ್ಕೂ ದೇಸಿ ಬೀಜಗಳಿಗೆ ಬೇಡಿಕೆ:ಜಿ.ಕೃಷ್ಣ ಪ್ರಸಾದ್ ಮೆಚ್ಚುಗೆ
ನಗರದಲ್ಲಿ ಆಯೋಜಿಸಲಾಗಿದ್ದ ’ದೇಸಿ ಸೀಡ್ಸ್ ಪ್ರ್ರೊಡ್ಯೂಸರ್ ಕಂಪನಿ’ಯ 12ನೇ ಸರ್ವ ಸದಸ್ಯರ ಸಭೆಯಲ್ಲಿ ಜಿ.ಕೃಷ್ಣ ಪ್ರಸಾದ್, ಡಾ. ಮಂಜುನಾಥ ಅಂಗಡಿ, ಶಿವಳ್ಳಿ ಬೋರೇಗೌಡ, ಡಾ.ಡಿ.ಎಂ.ನಾಗರಾಜ್, ರವಿ ಮಾಗಲ್ ಇತರರು ಇದ್ದರು.
ಕಂಪನಿ, ಬಂದ ಲಾಭಾಂಶದಲ್ಲಿ 75,000 ರೂ. ಅನ್ನು ಬೀಜ ಪೂರೈಕೆದಾರ ರೈತರಿಗೆ ಹಂಚಿಕೆ ಮಾಡಿದೆ
ಬೀಜ ಸ್ವಾವಲಂಬನೆಯನ್ನು ಸಾಕಾರಗೊಳಿಸುತ್ತಿರುವ ಸಂಸ್ಥೆ ಇತರ ರೈತ ಕಂಪನಿಗಳಿಗೆ ಮಾದರಿಯಾಗಿದೆ
ಮೈಸೂರು:
ದೇಶದ ಮೊದಲ ರೈತ ಸಾವಯವ ಬೀಜ ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ‘ದೇಸಿ ಸೀಡ್ಸ್ ಪ್ರೊಡ್ಯೂಸರ್
ಕಂಪನಿ’ಯ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆ ನಗರದಲ್ಲಿ ಆಯೋಜಿಸಲಾಗಿತ್ತು.
ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಿದ್ದರು.
ಮಳಿಗೆ ಆರಂಭ:
ದೇಸಿ ಬೀಜೋತ್ಪಾದಕರ ಕಂಪನಿಯ ಸಂಸ್ಥಾಪಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಸಮಾನ ಮನಸ್ಕ ಬೀಜ ಸಂರಕ್ಷಕರು ಜತೆಗೂಡಿ ಆರಂಭಿಸಿದ ರೈತ ಕಂಪನಿ ಹೆಮ್ಮರವಾಗಿ ಬೆಳೆದು, ಸಹಜ ಸೀಡ್ಸ್ ಬ್ರಾೃಂಡ್ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಕುಕ್ಕರಹಳ್ಳಿಕೆರೆ ಆವರಣದಲ್ಲಿ ‘ಕಿಸಾನ್ ಮಾಲ್’ ಸಾವಯವ ಮಳಿಗೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.
2025-26ರ ಸಾಲಿನಲ್ಲಿ 1.1 ಕೋಟಿ ರೂ. ವಹಿವಾಟು ಮಾಡಿದ ಕಂಪನಿ, ಬಂದ ಲಾಭಾಂಶದಲ್ಲಿ 75,000 ರೂ. ಅನ್ನು ಬೀಜ ಪೂರೈಕೆದಾರ ರೈತರಿಗೆ ಹಂಚಿಕೆ ಮಾಡಿದೆ ಎಂದು ತಿಳಿಸಿದರು. ಕೆಲವೇ ಆಸಕ್ತ ಬೀಜ ಸಂರಕ್ಷಕರ ದೂರದೃಷ್ಟಿಯ ಫಲವಾಗಿ ಸಹಜ ಸೀಡ್ಸ್ ಜನ್ಮತಾಳಿತು. ಇಂದು ಸಂಸ್ಥೆಯ ದೇಸಿ ಬೀಜಗಳಿಗೆ ಭಾರತದ ಉದ್ದಗಲಕ್ಕೂ ಗ್ರಾಹಕರಿದ್ದಾರೆ. ಮೇಘಾಲಯ, ಒಡಿಶಾ, ಆಂಧ್ರ ಪ್ರದೇಶದ ಸರ್ಕಾರ ಸಹಜ ಸೀಡ್ಸ್ ಬೀಜಗಳನ್ನು ಖರೀದಿಸುತ್ತಿದೆ. ಬೀಜ ಸ್ವಾವಲಂಬನೆಯನ್ನು ಸಾಕಾರಗೊಳಿಸುತ್ತಿರುವ ಸಂಸ್ಥೆ ಇತರ ರೈತ ಕಂಪನಿಗಳಿಗೆ ಮಾದರಿಯಾಗಿದೆ ಎಂದರು.
ಇಳುವರಿ ಕುಸಿತ :
ಕಾರ್ಯಕ್ರಮವನ್ನು ಉದ್ಘಾಟಿಸಿದ ತೋಟಗಾರಿಕಾ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ. ಮಂಜುನಾಥ ಅಂಗಡಿ ಮಾತನಾಡಿ, ನಿನೋ ಪರಿಣಾಮದಿಂದ ತೋಟಗಾರಿಕಾ ಬೆಳೆಗಳು, ಮಳೆ ಕೊರತೆಯ ಕಾರಣದಿಂದ ಕುಂಠಿತ ಬೆಳವಣಿಗೆ, ಹೂ ಬಿಡುವಿಕೆಯ ವಿಳಂಬವಾಗುತ್ತಿದೆ. ಅಲ್ಲದೆ ಕೀಟ ಮತ್ತು ರೋಗಗಳ ಉಲ್ಬಣ ದಿಂದ ಇಳುವರಿ ಕುಸಿತ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರೈತರು ಎಚ್ಚರಿಕೆ ವಹಿಸಿ, ಮುಂಜಾಗ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಿ. ಬರ ನಿರೋಧಕ ಗುಣದ ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಹತ್ವದ ಕೆಲಸ:
ಕಂಪನಿ ನಿರ್ದೇಶಕ ಶಿವಳ್ಳಿ ಬೋರೇಗೌಡ ಮಾತನಾಡಿ, ವಾತಾವರಣ ಬದಲಾವಣೆಗೆ ಸೂಕ್ತವಾಗಬಲ್ಲ ಸ್ಥಳೀಯ ತಳಿಗಳ ಬೀಜಗಳನ್ನು ರೈತರು ತಾವೇ ಉತ್ಪಾದಿಸಿ ಮಾರುಕಟ್ಟೆಗೆ ತರುವುದು ಬಹು ಮುಖ್ಯ. ಈ ನಿಟ್ಟಿನಲ್ಲಿ ಸಹಜ ಸೀಡ್ಸ್ ಮಹತ್ವದ ಕೆಲಸ ಮಾಡುತ್ತಿದೆ ಎಂದರು.
ಜೆ.ಪಿ.ನಗರ ರೋಟರಿ ಕ್ಲಬ್ ಅಧ್ಯಕ್ಷ ಡಾ.ಡಿ.ಎಂ.ನಾಗರಾಜ್ ಮಾತನಾಡಿದರು. ಕಂಪನಿಯ ಪ್ರಗತಿಗೆ ಶ್ರಮಿಸಿದ ಸಿ.ಪಿ.ಅರ್ಪಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ರವಿ ಮಾಗಲ್, ನಿರ್ದೇಶಕರಾದ ಮಂಜುಳಾ ರಾಮಕೃಷ್ಣ, ನರಸಿಂಹರೆಡ್ಡಿ, ಶ್ರೀನಿವಾಸಮೂರ್ತಿ, ಶ್ರೇಣಿಕರಾಜ್, ರೋಟರಿ ಕ್ಲಬ್ ಕಾರ್ಯದರ್ಶಿ ಎನ್. ಪ್ರಕಾಶ್ ಇದ್ದರು.