ಬಿಸಿಯೂಟ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಧರಣಿ
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಧರಣಿ
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಧರಣಿ
ಮೈಸೂರು: ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಶನಿವಾರ ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದೇಶದ ಕೋಟ್ಯಂತರ ಶಾಲಾ ಮಕ್ಕಳ ಹಸಿವು ನೀಗಿಸಿ, ಅಪೌಷ್ಟಿಕತೆ ನಿರ್ಮೂಲನೆ ಮಾಡುವಲ್ಲಿ ಬಿಸಿಯೂಟ ಯೋಜನೆಯ ಪಾತ್ರ ಅತ್ಯಂತ ದೊಡ್ಡದು. ಈ ಯೋಜನೆಯ ಬೆನ್ನೆಲುಬಾಗಿರುವ ಲಕ್ಷಾಂತರ ಬಿಸಿಯೂಟ ಕಾರ್ಮಿಕರು ಅತ್ಯಂತ ಕನಿಷ್ಠ ಗೌರವಧನದಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬೆಲೆ ಏರಿಕೆಯ ಈ ಕಾಲದಲ್ಲಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಈ ಕಾರ್ಮಿಕರ ಹಿತದೃಷ್ಟಿಯಿಂದ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ. ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ, ಇತರ ಶಾಸನಬದ್ಧ ಸೌಲಭ್ಯ ನೀಡಬೇಕು. ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನದ ಪಾಲನ್ನು ಹೆಚ್ಚಿಸಿ, ಕಾರ್ಮಿಕರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸಬೇಕು. ಪ್ರಸ್ತುತ ನೀಡುತ್ತಿರುವ ಅತ್ಯಲ್ಪ ಗೌರವಧನವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಪರಿಷ್ಕರಿಸಬೇಕು. ಬಿಸಿಯೂಟ ಕಾರ್ಮಿಕರಿಗೆ ನಿವೃತ್ತಿ ವೇತನ, ಇಎಸ್‌ಐ, ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕು. ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಕಾರ್ಮಿಕರಿಗೆ 5 ಲಕ್ಷ ಇಡುಗಂಟು ನೀಡಬೇಕು. ಈ ಯೋಜನೆಯನ್ನು ಖಾಸಗಿ ಅಥವಾ ಎನ್‌ಜಿಒ ಸಂಸ್ಥೆಗಳಿಗೆ ವಹಿಸದೆ ಸರ್ಕಾರವೇ ನೇರವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಪಿ.ಎಸ್.ಸಂಧ್ಯಾ, ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ, ಜಂಟಿ ಕಾರ್ಯದರ್ಶಿ ಮಹದೇವಮ್ಮ, ಪದಾಧಿಕಾರಿಗಳಾದ ಮಾಲಮ್ಮ, ಶಂಕ್ರಮ್ಮ, ಸೌಮ್ಯಾ, ಸುಮಾ, ಉಮಾ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net