ರಾಜ್ಯ ಚುನಾವಣಾ ಆಯೋಗದ ಆಯುಕ್ತರ ವಜಾಕ್ಕೆ ಆಗ್ರಹ

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ರವಿಕುಮಾರ್ ಒತ್ತಾಯ
  • ರಾಜಕಾರಣಿಯ ಹಿಂಬಾಲಕರಂತೆ ಮಾತನಾಡುತ್ತಿದ್ದಾರೆ.
  • ಇವರು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ಮುಂದುವರಿದಲ್ಲಿ ರಾಜ್ಯದಲ್ಲಿ ನ್ಯಾಯಸಮ್ಮತ, ಮುಕ್ತ ಚುನಾವಣೆ ಸಾಧ್ಯವಿಲ್ಲ.
ಮೈಸೂರು: ರಾಜ್ಯ ಚುನಾವಣಾ ಆಯೋಗದ ಆಯುಕ್ತರು ರಾಜಕೀಯ ಪಕ್ಷದ ಮುಖಂಡರಂತೆ ಸಿಎಂ ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿದ್ದು, ಅವರನ್ನು ಈ ಸ್ಥಾನದಿಂದ ವಜಾಗೊಳಿಸಬೇಕೆಂದು ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ರವಿಕುಮಾರ್ ತಿಳಿಸಿದರು.
ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಜಿ.ಎಸ್.ಸಂಗ್ರೇಶಿ ಆಯೋಗದ ಆಯುಕ್ತರಾಗಿದ್ದಾರೆ. ಆದರೆ ಇವರು ಈ ಹಿಂದೆ 2023ರಲ್ಲಿ ಮೈಸೂರು ವಕೀಲರ ಸಂಘ ಆಯೋಜಿಸಿದ್ದ ಸಿದ್ದರಾಮಯ್ಯ ಅಭಿನಂದನಾ ಕಾರ್ಯಕ್ರಮದಲ್ಲಿ ತಾವು 1988ರಿಂದಲೂ ಸಿದ್ದರಾಮಯ್ಯ ಅವರನ್ನು ಅನುಸರಿಸಿಕೊಂಡು ಬಂದಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಿದ್ದರಾಮಯ್ಯ ಅವರು ಕೆಲವೊಂದು ಪ್ರಕರಣಗಳಲ್ಲಿ ಆರೋಪಿ ಎಂದು ತಿಳಿದಿದ್ದರೂ ತಾವೊಬ್ಬ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎನ್ನುವ ಅರಿವಿದ್ದರೂ ಆ ರೀತಿ ಹೇಳಿಕೆ ಹಲವಾರು ಬಾರಿ ನೀಡಿದ್ದಾರೆ. ರಾಜಕಾರಣಿಯ ಹಿಂಬಾಲಕರಂತೆ ಮಾತನಾಡುತ್ತಿದ್ದಾರೆ. 
ಹೀಗಾಗಿ ಇವರು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ಮುಂದುವರಿದಲ್ಲಿ ರಾಜ್ಯದಲ್ಲಿ ನ್ಯಾಯಸಮ್ಮತ, ಮುಕ್ತ ಚುನಾವಣೆ ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರಪತಿಯವರ ಗಮನಕ್ಕೆ ತಂದು ಇವರನ್ನು ಆ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 
ಪಕ್ಷದ ಮುಖಂಡರಾದ ಆನಂದ್, ನಾಗೇಂದ್ರ, ಲೋಕೇಶ್, ವೇಣುಗೋಪಾಲ್, ಹರೀಶ್ ಹಾಗೂ ರವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net