ಮೆದುಳು ಗಡ್ಡೆಗಳ ಬಗ್ಗೆ ಇರುವ ಭ್ರಮೆಗಳು: ಅನಗತ್ಯ ಭಯವನ್ನು ಹುಟ್ಟಿಸುವ ಮಿಥ್ಯೆಗಳು

 ಡಾ. ಮಕ್ಸೂದ್ ಅಹ್ಮದ್
ಡಾ. ಮಕ್ಸೂದ್ ಅಹ್ಮದ್
Published on

ಮೆದುಳು ಗೆಡ್ಡೆ ಅಂದರೆ ಮಾರಣಾಂತಿಕ, ಚಿಕಿತ್ಸೆ ಸಾಧ್ಯವಿಲ್ಲ ಎಂಬ ಅಪನಂಬಿಕೆ ಬಹುತೇಕ ಜನಸಾಮಾನ್ಯರಲ್ಲಿ ಆಳವಾಗಿ ಬೇರೂರಿದೆ. ಇದರಿಂದಾಗಿ ಮೆದುಳಿನ ಗೆಡ್ಡೆಗಳು ಹಾಗೂ ಅವುಗಳ ಚಿಕಿತ್ಸೆಯ ಬಗ್ಗೆ ನಮ್ಮ ಸಮಾಜದಲ್ಲಿ ಅನಗತ್ಯ ಭಯ, ತಪ್ಪು ಕಲ್ಪನೆಗಳು, ಮತ್ತು ಅತಿಯಾದ ಆತಂಕ ವ್ಯಾಪಕವಾಗಿವೆ. ವಾಸ್ತವದಲ್ಲಿ, ಇದು ನಿಜವಲ್ಲ. ವೈಜ್ಞಾನಿಕ ಕ್ಷೇತ್ರದಲ್ಲಿ ಆಗುತ್ತಿರುವ ಆಧುನಿಕ ಬೆಳವಣಿಗೆಗಳ ಸಹಾಯದಿಂದ ಇಂದು ಬಹುತೇಕ ಮೆದುಳಿನ ಗೆಡ್ಡೆಗಳಿಗೆ ಅತ್ಯುನ್ನತ ಚಿಕಿತ್ಸೆ ನೀಡಬಹುದಾಗಿದೆ. ಇಷ್ಟೇ ಅಲ್ಲ ಹಲವು ಮೆದುಳಿನ ಗೆಡ್ಡೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.

ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಮೆದುಳಿನ ಗೆಡ್ಡೆಗಳ ಅತ್ಯುನ್ನತ ಚಿಕಿತ್ಸೆ ಅಥವಾ ಅವುಗಳ ಸಂಪೂರ್ಣ ಗುಣಪಡಿಸುವಿಕೆಗೆ - ಅವುಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಅತಿ ಅನಿವಾರ್ಯವಾಗಿದೆ. ಇದು ಜನಮಾನಸದಲ್ಲಿ ಬೇರೂರಿರುವ ಕೆಲವು ಭ್ರಮೆಗಳನ್ನು ಹೋಗಲಾಡಿಸುವುದು ಅಗತ್ಯವಾಗಿದೆ:

ಮೊದಲನೆಯ ಮಿಥ್ಯೆ:

ಪ್ರತಿ ಮೆದುಳು ಗಡ್ಡೆ ಕ್ಯಾನ್ಸರ್ ಗಡ್ಡೆಯೇ ಆಗಿರುತ್ತದೆ. ಇದು ಸತ್ಯವಲ್ಲ. ಪ್ರತಿ ಮೆದುಳು ಗಡ್ಡೆಗಳು ಕ್ಯಾನ್ಸರ್ ಆಗಿರುವುದಿಲ್ಲ. ಹಲವಾರು ಗಡ್ಡೆಗಳು ಸೌಮ್ಯ (ಚಿಛ್ಞಿಜಿಜ್ಞ) ಸ್ವಭಾವದ ಗೆಡ್ಡೆಗಳಾಗಿರುತ್ತವೆ. ಅವು ನಿಧಾನವಾಗಿ ಬೆಳೆಯುತ್ತವೆ ಮತ್ತು ಅವುಗಳನ್ನು ಸರಿಯಾದ ಚಿಕಿತ್ಸೆಯಿಂದ ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಅಥವಾ ಗುಣಪಡಿಸಬಹುದಾಗಿದೆ.

ಎರಡನೆಯ ಮಿಥ್ಯೆ:

ಮೆದುಳು ಗಡ್ಡೆ ಬಂದರೆ ಶಸ್ತ್ರಚಿಕಿತ್ಸೆ ಕಡ್ಡಾಯ; ಮತ್ತು ಶಸ್ತ್ರಚಿಕಿತ್ಸೆ ಜೀವಕ್ಕೆ ಅಪಾಯಕಾರಿ ಆಗಬಹುದು. ಇಲ್ಲ. ಇಂದಿನ ವೈದ್ಯಕೀಯ ವಿಜ್ಞಾನ ಬಹಳ ಮುಂದುವರೆದಿದೆ. ಶಸ್ತ್ರಚಿಕಿತ್ಸೆಯೊಂದೇ ಇವುಗಳ ಚಿಕಿತ್ಸಾ ಕ್ರಮವಾಗಿ ಉಳಿದಿಲ್ಲ. ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನ, ಸೂಕ್ಷ್ಮ ಶಸ್ತ್ರಚಿಕಿತ್ಸಾ ವಿಧಾನಗಳು, ವಿಕಿರಣ (ರೇಡಿಯೇಷನ್), ಹಾಗೂ ಔಷಧ ಚಿಕಿತ್ಸೆಗಳ ಸಹಾಯದಿಂದ ಅನೇಕ ರೋಗಿಗಳು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಎಂದರೆ ಅಂತ್ಯವಲ್ಲ; ಬಹುಸಾರಿ ಅದು ಹೊಸ ಆರಂಭವಾಗುತ್ತದೆ.

ಮೂರನೆಯ ಮಿಥ್ಯೆ:

ಪದೇ ಪದೇ ಬರುವ ಅಥವಾ ಅತಿ ತೀವ್ರವಾದ ತಲೆನೋವು ಎಂದರೆ ಮೆದುಳು ಗಡ್ಡೆ ಎಂದೇ ಅರ್ಥ.

ಇಲ್ಲ. ತಲೆನೋವು ಬಹಳ ಸಾಮಾನ್ಯ ಸಮಸ್ಯೆ. ಅದು ನಿದ್ರೆ ಕೊರತೆ, ಒತ್ತಡ, ಕಣ್ಣುಗಳ ಸಮಸ್ಯೆ ಅನೇಕ ಕಾರಣಗಳಿಂದಾಗಿ ಸಂಭವಿಸುತ್ತದೆ. ತಲೆನೋವಿನೊಂದಿಗೆ ನಿರಂತರ ವಾಂತಿ, ದೃಷ್ಟಿ ಸಮಸ್ಯೆ, ಕೈ-ಕಾಲುಗಳಲ್ಲಿ ಬಲಹೀನತೆ ಮುಂತಾದ ಲಕ್ಷಣಗಳು ಇದ್ದಾಗ ಮಾತ್ರ ಗಂಭೀರವಾದ ಸಮಸ್ಯೆ ಇರಬಹುದು ಎಂದರ್ಥ ಹಾಗೂ ಇದಕ್ಕೆ ತಕ್ಷಣದ ಪರಿಶೀಲನೆ ಅಗತ್ಯವಾಗಿರುತ್ತದೆ.

ನಾಲ್ಕನೆಯ ಮಿಥ್ಯೆ: ಮೆದುಳು ಗಡ್ಡೆ ಅನುವಂಶಿಕವಾಗಿಯೇ ಬರುತ್ತದೆ.

ಕೆಲವು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿದರೆ, ಹೆಚ್ಚಿನ ಮೆದುಳು ಗಡ್ಡೆಗಳು ಅನುವಂಶಿಕವಾಗಿ ಹರಡುವುದಿಲ್ಲ. ಅನಗತ್ಯ ಆತಂಕದಲ್ಲಿ ಬದುಕುವ ಅಗತ್ಯ ಇಲ್ಲ.

ಒಟ್ಟಿನಲ್ಲಿ ಹೇಳುವುದಾದರೆ, ಭಯಕ್ಕಿಂತ ಜಾಗೃತಿ ಮುಖ್ಯ. ಲಕ್ಷಣಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಹಾಗೆಯೆ, ಪ್ರತಿಯೊಂದು ಲಕ್ಷಣಕ್ಕೂ ಗಡ್ಡೆಯ ಭಯವೂ ಬೇಡ. ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸಿದರೆ, ಸಮಸ್ಯೆ ಎಷ್ಟೇ ದೊಡ್ಡದಾಗಿದ್ದರೂ ಪರಿಹಾರದ ದಾರಿ ಇರುತ್ತದೆ. ಮೆದುಳು ಗಡ್ಡೆಯ ವಿರುದ್ಧದ ಹೋರಾಟದಲ್ಲಿ ಸರಿಯಾದ ಮಾಹಿತಿ, ನಂಬಿಕೆ, ಮತ್ತು ಸಮಯೋಚಿತ ಚಿಕಿತ್ಸೆ ಇವುಗಳೇ ನಿಜವಾದ ಶಕ್ತಿ; ಊಹಾಪೋಹ, ಭಯ, ಹಾಗೂ ಆತಂಕಗಳಲ್ಲ.

(ಮಾಹಿತಿ: ಡಾ. ಮಕ್ಸೂದ್ ಅಹ್ಮದ್ ಎ.ಆರ್. ಸೀನಿಯರ್ ಕನ್ಸಲ್ಟೆಂಟ್ - ನರಶಸ್ತ್ರಚಿಕಿತ್ಸೆ, ಮಣಿಪಾಲ್ ಆಸ್ಪತ್ರೆ ಮೈಸೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net