ಮೈಸೂರು: ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳ ಫಲನುಭವಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಸ್ಪಂದಿಸುವ ಮೂಲಕ ಪರಿಹರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುರುಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಅದರಂತೆ ನಾವೆಲ್ಲರೂ ಪೂರಕವಾಗಿರಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿಯನ್ನು ತೆರಿಗೆ ಪಾವತಿ ಮಾಡಿದ ಆಧಾರದ ಮೇಲೆ ಎಪಿಎಲ್‌ಗೆ ಪರಿವರ್ತಿಸುವಾಗ ಕೂಲಕಂಷವಾಗಿ ಪರಿಶೀಲಿಸಬೇಕು. ಬಡಜನರು ಕೂಡ ವಿವಿಧ ಸಾಲ ಮಾಡುವಾಗ ತೆರಿಗೆ ಪಾವತಿಸಿರುತ್ತಾರೆ. ವಾಸ್ತವಾಂಶವನ್ನು ಗಮನದಲ್ಲಿರಿಸಿಬೇಕು. ನೈಜ ಫಲಾನುವಭವಿಗಳು ಅನ್ಯಭಾಗ್ಯ ಯೋಜನೆಯಿಂದ ವಂಚಿತರಾಗಬಾರದು ಎಂದರು.
ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವರಿಗೆ ಅಗತ್ಯ ದಾಖಲೆ ಪರಿಶೀಲಿಸಿ ನೋಂದಣಿ ಮಾಡಿಕೊಡಿ ಎಂದು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು. ತಾಲೂಕಿನಲ್ಲಿ ಯುವನಿಧಿ ಯೋಜನೆಗೆ ಒಟ್ಟು 5,646 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ. ಸೆಪ್ಟೆಂಬರ್ ಅಂತ್ಯದವರೆಗೆ 12.87 ಕೋಟಿ ರೂ. ಯೋಜನೆಯ ಫಲಾನುಭವಿಗಳಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ತಾಲೂಕು ವ್ಯಾಪ್ತಿಗೆ ಬರುವ ಸಾತಗಳ್ಳಿ ಘಟಕದಿಂದ ಒಟ್ಟು 2.6 ಕೋಟಿ ಮಹಿಳಾ ಮತ್ತು ಮಕ್ಕಳು ಸೌಲಭ್ಯ ಪಡೆದಿದ್ದು, 44.27 ಕೋಟಿ ಪ್ರಯಾಣದ ಮೊತ್ತವಾಗಿದೆ. ಶಾಲಾ, ಕಾಲೇಜು ಮಕ್ಕಳಿಗೆ ತೊಂದರೆ ಉಂಟಾಗದಂತೆ ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸಬೇಕು ಎಂದು ಸೂಚನೆ ನೀಡಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ.ಕೃಷ್ಣ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಅನಾನುಕೂಲ ಉಂಟಾಗದಂತೆ ಸಮರ್ಪಕವಾಗಿ ಯೋಜನೆ ಅನುಷ್ಠಾನ ಮಾಡೋಣ. ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ತಾಂತ್ರಿಕ ದೋಷದಿಂದ ಹಣ ಸಂದಾಯವಾಗದಿದ್ದರೆ ಕೂಡಲೇ ಅವರ ಪಡಿತರ ಚೀಟಿ ಸಂಖ್ಯೆ ಪಡೆದು ಸಂಬಂಧಿಸಿದ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಬಿ.ರವಿ, ರಾಣಿ, ಎಂ.ಸೋಮಣ್ಣ, ಕರೀಗೌಡ, ಎಚ್.ಡಿ.ಚನ್ನಯ್ಯ, ತಾಲೂಕು ಪಂಚಾಯಿತಿ ಪ್ರಗತಿ ಸಹಾಯಕರಾದ ಕಿಶೋರ್, ವಿಷಯ ನಿರ್ವಾಹಕ ಸೋಮಶೇಖರ್ ಇದ್ದರು.