ಹಾಡಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಿ : ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಸ್.ಅರುಣ್‌ಕುಮಾರ್
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸ್.ಅರುಣ್ ಕುಮಾರ್, ಕರೀಗೌಡ, ಯುಕೇಶ್‌ಕುಮಾರ್, ಸಾ.ಮಾ.ಯೋಗೇಶ್, ಪ್ರಭುಸ್ವಾಮಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಾಡಿ ಜನರಿಗೆ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ನೋಂದಣಿ ಮಾಡಿಸಿ
ಪಡಿತರ ಗುಣಮಟ್ಟದಿಂದ ಕೂಡಿರಬೇಕು
ಕಟ್ಟಕಡೆಯ ಜನರಿಗೆ ಸರ್ಕಾರದ ಯೋಜನೆ ಸಾರ್ಥಕತೆ ಕಾಣುತ್ತದೆ
ಮೈಸೂರು: ಜಿಲ್ಲೆಯ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಸ್.ಅರುಣ್ ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಡಿ ಜನರಿಗೆ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿ ತಾಲೂಕು ಮಟ್ಟದ ಬುಡಕಟ್ಟು ಅಧಿಕಾರಿ ಹಾಜರಿದ್ದು, ನೋಂದಣಿಯಿಂದ ಅರ್ಹರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕರಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳಲ್ಲಿ ನೀಡಲಾಗುವ ಪಡಿತರ ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕಳಪೆ ಗುಣಮಟ್ಟ ಕಂಡಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ನ್ಯಾಯ ಬೆಲೆ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿಯವರು ಬಳಸುತ್ತಿರುವ ತೂಕದ ಯಂತ್ರ ಸರಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಸರ್ಕಾರದ ನಡೆ ಹಾಡಿಗಳ ಕಡೆ ಎಂಬಂತೆ ಹಾಡಿಗಳಲ್ಲಿರುವ ಫಲಾನುಭವಿಗಳಿಗೆ ಯೋಜನೆಗಳು ತಲುಪಿದರೆ, ಕಟ್ಟಕಡೆಯ ಜನರಿಗೆ ಸರ್ಕಾರದ ಯೋಜನೆ ಸಾರ್ಥಕತೆ ಕಾಣುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಕರೀಗೌಡ ಮಾತನಾಡಿ, ಗೃಹಲಕ್ಷ್ಮಿ ಫಲಾನುಭವಿಗಳು ಮೃತಪಟ್ಟಿದ್ದರೆ ಅಂತಹವರಿಗೆ ಹಣ ಹೋಗದಂತೆ ಎಚ್ಚರಿಕೆ ವಹಿಸಬೇಕು. ಮರಣ ಪ್ರಮಾಣ ಪತ್ರ ಪಡೆದುಕೊಂಡು ತಕ್ಷಣ ಹಣ ತಡೆಯಾಗಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯ ಸಾ.ಮಾ.ಯೋಗೇಶ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ 8434 ಮಹಿಳೆಯರು ಮೃತಪಟ್ಟಿದ್ದು, ಅವರ ಕುಟುಂಬದಲ್ಲಿ ಬೇರೆ ಮಹಿಳೆಯರು ಇದ್ದಲ್ಲಿ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯನ್ನು ಬದಲಾಯಿಸಿ ಅವರಿಗೆ ಯೋಜನೆಯನ್ನು ಒದಗಿಸಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಯ 5 ಇಲಾಖೆಗಳು ಹಾಗೂ ಬುಡಕಟ್ಟು ಯೋಜನೆಗಳ ಇಲಾಖೆ ಅವರು ಒಟ್ಟಿಗೆ ಸೇರಿ ಹಾಡಿಗಳಿಗೆ ಭೇಟಿ ನೀಡಿ ಶಿಬಿರಗಳನ್ನು ನಡೆಸಿ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಒದಗಿಸುವುದರ ಜತೆಗೆ ಬೇರೆ ಸರ್ಕಾರದ ಯೋಜನೆಗಳನ್ನು ಒದಗಿಸಿಕೊಡಿ ಎಂದು ಸೂಚಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯರಾದ ಹುಣಸೂರು ಬಸವಣ್ಣ, ಲಲಿತಾ, ಅಬ್ದುಲ್ ಖಾದರ್, ಚಲುವರಾಜು, ಎಂ.ಎಸ್. ಮಹದೇವ್, ಉದಯ್ ಶಂಕರ್, ಚಾಮರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಇತರರು ಇದ್ದರು.