ಬೀಚನಹಳ್ಳಿಯನ್ನು ಕಂದಾಯ ಗ್ರಾಮವಾಗಿ ಘೋಷಿಸಿ

ಬೀಚನಹಳ್ಳಿಯನ್ನು ಕಂದಾಯ ಗ್ರಾಮವಾಗಿ ಘೋಷಿಸಿ
ಬೀಚನಹಳ್ಳಿಯನ್ನು ಕಂದಾಯ ಗ್ರಾಮವಾಗಿ ಘೋಷಿಸಿ
Published on
ಎಚ್.ಡಿ.ಕೋಟೆ: ತಾಲೂಕಿನ ಬೀಚನಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಒತ್ತಾಯಿಸಿದರು.
ಅಧಿವೇಶನದಲ್ಲಿ ಸೋಮವಾರ ತಾಲೂಕಿನ ಕಬಿನಿ ಕಾಲನಿಯನ್ನು ಬೀಚನಹಳ್ಳಿ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡುವ ಕುರಿತು ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಹಾಗೂ ಕಂದಾಯ ಸಚಿವ ಶ್ರೀ ಕೃಷ್ಣಬೈರೇಗೌಡ ಅವರಿಗೆ ಚುಕ್ಕೆ ಪ್ರಶ್ನೆ ಗುರುತಿನ ಮೂಲಕ ಪ್ರಶ್ನೆ ಕೇಳಲಾಯಿತು.
1959ರಲ್ಲಿ ಕಬಿನಿ ಜಲಾಶಯ ಅಣೆಕಟ್ಟು ಕಟ್ಟಲು ಸಾವಿರಾರು ಕುಟುಂಬಗಳು ಬಂದು ನೆಲೆಸಿದವು. ಆ ಕುಟುಂಬಗಳಿಗೆ ನಿವೇಶನ ಕೊಡುವಂತಹ ಕೆಲಸ ಆಯಿತು. ಕಬಿನಿ ಜಲಾಶಯ ಭರ್ತಿ ಆದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸುವ ಕೆಲಸವನ್ನು ಎಲ್ಲ ಮುಖ್ಯಮಂತ್ರಿಗಳು ಮಾಡಿಕೊಂಡು ಬಂದಿದ್ದಾರೆ. ಅರವತ್ತು ವರ್ಷಗಳಿಂದ ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು ಎಂಬುದು ಕೂಗಾಗಿದೆ. ಈಗಾಗಲೇ ಕೆಆರ್‌ಎಸ್ ಜಲಾಶಯದ ಪಕ್ಕದ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿರುವುದರಿಂದ ನಮ್ಮ ಬೀಚನಹಳ್ಳಿ ಗ್ರಾಮವನ್ನು ಕೂಡ ಅದೇ ರೀತಿ ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರಸ್ತುತ ಕಬಿನಿ ಕಾಲನಿ ವಸತಿ ಪ್ರದೇಶವು ನೀರಾವರಿ ಇಲಾಖೆಯ ಅಧೀನದಲ್ಲಿರುವುದರಿಂದ, ಈ ವಿಷಯವನ್ನು ನೀರಾವರಿ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಂದಾಯ ಗ್ರಾಮವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net