ಮೈಸೂರು: ಚರ್ಚಾಪಟುಗಳು ಭಾಷಾ ಶುದ್ಧತೆಯೊಂದಿಗೆ ವಿಚಾರ ಮಂಡನೆ ಮಾಡಬೇಕು. ವಿಷಯದ ಜ್ಞಾನವಿರಬೇಕು ಜತೆಗೆ ವಿಷಯವನ್ನು ಕ್ರಮಬದ್ಧವಾಗಿ ಮಂಡಿಸಬೇಕು ಎಂದು ಹಾಸನ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಶಂಕರ್ ಹೇಳಿದರು.
ನಗರದ ವಾಣಿ ವಿಲಾಸ ರಸ್ತೆಯಲ್ಲಿ ಚಾಮರಾಜಪುರಂ ಜೆಎಸ್‌ಎಸ್ ವಿದ್ಯಾರ್ಥಿನಿಲಯ (ಪ್ರಧಾನ ಭವನ)ದಲ್ಲಿ ಆಯೋಜಿಸಿದ್ದ ಅಂತರ ವಿದ್ಯಾರ್ಥಿನಿಲಯ ಚರ್ಚಾಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಏನನ್ನು ಹೇಳಬೇಕು. ಯಾವುದನ್ನೂ ಯಾರಿಗೆ ಮುಟ್ಟಿಸಬೇಕು ಸೇರಿದಂತೆ ಇನ್ನೂ ಹಲವು ಸಂವಹನ ಕಾರ್ಯಗಳಿಗೆ ಭಾಷೆಯೇ ಪ್ರಮುಖ ಮಾಧ್ಯಮವಾಗಿರುತ್ತದೆ. ಭಾಷೆಯ ಮೂಲಕ ನಾವು ಬೇರೆಯವರಿಗೆ ಎಲ್ಲವನ್ನೂ ತಿಳಿಸಬಹುದು. ಮನುಷ್ಯ ಆಡುವ ಭಾಷೆಯೂ ಆತನ ಭಾವನೆಗಳ ಅಭಿವ್ಯಕ್ತಿಯಾಗಿರುತ್ತದೆ ಎಂದರು.
ಮೈಸೂರಿನ ವಿದ್ಯಾರ್ಥಿನಿಲಯಗಳಲ್ಲಿ ಚರ್ಚಾಸ್ಪರ್ಧೆ ನಡೆಸುವುದಕ್ಕೆ ಅದರದೇ ಆದ ಇತಿಹಾಸವಿದೆ. ಮೈಸೂರಿನಲ್ಲಿ ಹಿಂದಿನಿಂದಲೂ ಭಾಷಣ ಕಲೆಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ರಂಗನಾಥ್ ಮಾತನಾಡಿ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಭಾಷಾ ಕೌಶಲವೃದ್ಧಿಯಾಗುತ್ತದೆ. ಸಭೆ ಸಮಾರಂಭಗಳಲ್ಲಿ ವೇದಿಕೆ ನಿರ್ವಹಣೆಯಂತಹ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ, ವಿಷಯ ಮಂಡನೆ, ವಿಶ್ಲೇಷಣಾತ್ಮಕವಾಗಿ ಚಿಂತನೆ ಮಾಡಲು ಸಹಾಯಕವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೂರ್ಣವಾಗಿ ಕನ್ನಡವನ್ನು ಬಳಸದೆ ಇಂಗ್ಲಿಷ್ ಭಾಷೆಯನ್ನೇ ಬಳಸುತ್ತಿರುವುದು ವಿಪರ್ಯಾಸ. ಹೀಗಾಗಿ ಕನ್ನಡ ಭಾಷೆಯೂ ಕವಲುದಾರಿಯಲ್ಲಿದೆ ಎಂದರು.
ನಿಲಯಪಾಲಕ ಡಾ.ಎನ್. ಮಹದೇವಸ್ವಾಮಿ, ತೀರ್ಪುಗಾರರಾದ ಡಾ.ಮಹೇಶ್ ದಳಪತಿ, ಪೃಥ್ವಿರಾಜ್, ದಿಲೀಪ್, ನಿಲಯದ ವ್ಯವಸ್ಥಾಪಕ ಪ್ರದೀಪ್ ಇತರರು ಇದ್ದರು.
ಬಹುಮಾನ ವಿಜೇತರು:
ಕೆಎಸ್‌ಎಸ್ ಪಾಠಶಾಲೆಯ ರಾಹುಲ್( ಪ್ರ) , ಜೆಎಸ್‌ಎಸ್ ವಿದ್ಯಾರ್ಥಿನಿಲಯ(ಪ್ರಧಾನಭವನ)ದ ಅಶ್ವತ್ಥ್(ದ್ವಿ), ಹೂಟಗಳ್ಳಿ ಬಿಸಿಎಂ ವಿದ್ಯಾರ್ಥಿ ನಿಲಯದ ರಘುನಂದನ್(ತೃ) ಚರ್ಚಾಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಪಡೆದುಕೊಂಡರು.