ಆದಿವಾಸಿ ಮಹಿಳೆಯರ ಸ್ಥಿತಿಗತಿ ಮಾಹಿತಿ ಸಂಗ್ರಹ

ಹುಣಸೂರು ತಾಲೂಕು ಹೆಬ್ಬಳ್ಳ ಹಾಡಿಯಲ್ಲಿ ಕ್ರೈಸ್ತ ಡೀಮ್ಡ್ ವಿವಿಯ ಪ್ರಾಧ್ಯಾಪಕರಾದ ಡಾ.ಎನ್.ಉಷಾ ಮತ್ತು ಡಾ.ಶ್ರೀಜ ಗಂಗಾಧರನ್ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.
ಹುಣಸೂರು ತಾಲೂಕು ಹೆಬ್ಬಳ್ಳ ಹಾಡಿಯಲ್ಲಿ ಕ್ರೈಸ್ತ ಡೀಮ್ಡ್ ವಿವಿಯ ಪ್ರಾಧ್ಯಾಪಕರಾದ ಡಾ.ಎನ್.ಉಷಾ ಮತ್ತು ಡಾ.ಶ್ರೀಜ ಗಂಗಾಧರನ್ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.
Published on
ಹುಣಸೂರು: ಬೆಂಗಳೂರಿನ ಕ್ರೈಸ್ತ್ ಡೀಮ್ಡ್ ವಿಶ್ವವಿದ್ಯಾಲಯದ ಬಿಸಿನೆಸ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ಸಂಶೋಧಕ ಪ್ರಾಧ್ಯಾಪಕ ಡಾ.ಎನ್.ಉಷಾ ಹಾಗೂ ಮನಃಶಾಸ್ತ್ರ ಪ್ರಾಧ್ಯಾಪಕ ಡಾ.ಶ್ರೀಜ ಗಂಗಾಧರನ್ ಅವರು ತಾಲೂಕಿನ ನೆರಳಕುಪ್ಪೆ ಬಿ ಹಾಡಿ, ಹೆಬ್ಬಾಳ ಹಾಡಿ ಹಾಗೂ ಶೆಟ್ಟಳ್ಳಿ ಹಾಡಿಗಳಿಗೆ ಸೋಮವಾರ ಭೇಟಿ ನೀಡಿ, ಆದಿವಾಸಿ ಮಹಿಳೆಯರ ಸ್ಥಿತಿಗತಿ, ಜೀವನಶೈಲಿ, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳ ಕುರಿತು ಸಂವಾದ ನಡೆಸಿದರು.
ಕಾಡಂಚಿನ ಹಾಡಿಗಳಿಗೆ ಭೇಟಿ ನೀಡಿ ಆದಿವಾಸಿ ಮಹಿಳೆಯರೊಂದಿಗೆ ಗುಂಪುಚರ್ಚೆ ನಡೆಸಿದರು. ಆದಿವಾಸಿಗಳ ಕುಟುಂಬದಲ್ಲಿ ಆರೋಗ್ಯದ ಪರಿಸ್ಥಿತಿ, ಮಾನಸಿಕ ಸ್ಥಿತಿ, ಹದಿಹರೆಯದ ಬಾಲಕಿಯರ ನೋವು, ನಲಿವು ಮುಂತಾದವುಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಆದಿವಾಸಿಗಳಲ್ಲಿ ಅಂತರಜಾತಿ ವಿವಾಹದಿಂದಾಗಿರುವ ಮಹಿಳೆಯರ ಜೀವನಕ್ರಮ, ಬವಣೆ ಕುರಿತು ಮಾಹಿತಿ ಕಲೆಹಾಕಿದರು.
ಸ್ವಾಭಿಮಾನದ ಬದುಕು ಇಲ್ಲ: ಪ್ರಾಧ್ಯಾಪಕಿ ಡಾ.ಎನ್.ಉಷಾ ಮಾತನಾಡಿ, ಹಾಡಿಗಳಲ್ಲಿ ಆದಿವಾಸಿ ಮಹಿಳೆಯರ ಇಂದಿನ ಪರಿಸ್ಥಿತಿ, ಬದುಕು, ಮುಖ್ಯವಾಹಿನಿಗೆ ಬರುವಲ್ಲಿನ ಅವರ ಪ್ರಯತ್ನ ಮುಂತಾದವುಗಳ ಕುರಿತಾಗಿ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ. ದೇಶದ ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ್, ಮಿಜೊರಾಂ, ಮೇಘಾಲಯ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಆದಿವಾಸಿಗಳ ಬದುಕು ಅತ್ಯಂತ ಸುಭದ್ರವಾಗಿದೆ. ಆಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಣ ಆದಿವಾಸಿಗಳಲ್ಲಿ ತೆರೆದುಕೊಂಡಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಾಗೇಕೆ ಆಗಿಲ್ಲವೆಂದು ಪ್ರಶ್ನಿಸಿದರು.
ಇದಕ್ಕುತ್ತರಿಸಿದ ಆದಿವಾಸಿ ಮುಖಂಡ ಜಯಪ್ಪ, ಈಶಾನ್ಯ ಭಾರತದ ಆದಿವಾಸಿಗಳಿಗೆ ಅವರ ಸ್ವಯಂ ಆಡಳಿತ, ಅರಣ್ಯ ಪ್ರದೇಶ, ಸಂಸ್ಕೃತಿ, ಭಾಷೆ ಅವರ ನಿಯಂತ್ರಣದಲ್ಲೇ ಇದ್ದು ಸ್ವಾಭಿಮಾನದಿಂದ ಬಾಳುತ್ತಿದ್ದಾರೆ. ಆದ್ದರಿಂದ ಅವರಿಗೆ ಶಿಕ್ಷಣ ಮೈಗೂಡಿದೆ. ಆದರೆ ಇಲ್ಲಿ ನಮ್ಮ ಕಾಡು ನಮಗಿಲ್ಲ, ನಮ್ಮ ಆಡಳಿತ ನಮಗಿಲ್ಲ, ನಮ್ಮ ಭಾಷ ಪರಿಗಣನೆಗಿಲ್ಲ, ರಾಜಕೀಯ ಅಧಿಕಾರ, ಒಳ ಮೀಸಲಾತಿ ಇಲ್ಲ. ಉಂಡವರಿಗೆ ಉಣ ಬಡಿಸುತ್ತಿದೆ ಈ ಸರ್ಕಾರ. ಒಬ್ಬ ಎಂಎಲ್‌ಎ ಇಲ್ಲ. ಸರ್ಕಾರದಲ್ಲಿ ನಮ್ಮವರಿಲ್ಲ. ಕೂಲಿ ಬದುಕು ನಮ್ಮದು. ನಮ್ಮ ಕಾಡನ್ನು ನಾಶ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಅಭಿವೃದ್ಧಿ ಹೊಂದುವುದಾದರೂ ಹೇಗೆ ಎಂದು ಪ್ರಶ್ನೆ ಹಾಕುವ ಮೂಲಕ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಇದೇ ವೇಳೆ ಗಿಡಮೂಲಿಕೆ ತಜ್ಞೆ ಮಾಸ್ತಮ್ಮ ಅವರನ್ನು ಭೇಟಿ ಮಾಡಿ, ಸರ್ಕಾರಿ ಆರೋಗ್ಯ ಸೇವೆ ಮತ್ತು ಗಿಡಮೂಲಿಕೆ ಪದ್ಧತಿಯ ಸಮನ್ವಯತೆ ಹೇಗೆ ಸಾಧಿಸಲಾಗುತ್ತಿದೆ ಎಂದು ಮಾಹಿತಿ ಪಡೆದರು. ಶೆಟ್ಟಳ್ಳಿ ಹಾಡಿಯಲ್ಲಿ ಜೇನುಕುರುಬರು, ಸೋಲಿಗರು ಹಾಗೂ ಪಂಜರಿಯರವರು ಅಂತರ ಬುಡಕಟ್ಟು ಮದುವೆ ಆಗಿ ಬಾಳುತ್ತಿರುವುದನ್ನು ಇಲ್ಲಿನ ಭೋಜಮ್ಮ ರಾಮು ಹಾಗೂ ಇತರರು ವಿವರಿಸಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಆದಿವಾಸಿ ಮುಖಂಡರಾದ ಕೆಂಪಮ್ಮ, ಮಾಸ್ತಯ್ಯ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net