ಅ.18,19ರಂದು ದಸರಾ ಕಂಬಳ

ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವ ಸಂಬಂಧ ಶಾಸಕ ಅಶೋಕ್ ರೈ ಶುಕ್ರವಾರ ವಿಜಯನಗರ 1ನೇ ಹಂತ ಬಳಿ ಸ್ಥಳ ಪರಿಶೀಲನೆ ನಡೆಸಿದರು. ವಿಜಯ್ ಕುಮಾರ್, ಹರ್ಷಾ ಪ್ರಿಯಂವದಾ, ಸುಂದರರಾಜ್, ಸುದರ್ಶನ್ ಇತರರಿದ್ದರು.
ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವ ಸಂಬಂಧ ಶಾಸಕ ಅಶೋಕ್ ರೈ ಶುಕ್ರವಾರ ವಿಜಯನಗರ 1ನೇ ಹಂತ ಬಳಿ ಸ್ಥಳ ಪರಿಶೀಲನೆ ನಡೆಸಿದರು. ವಿಜಯ್ ಕುಮಾರ್, ಹರ್ಷಾ ಪ್ರಿಯಂವದಾ, ಸುಂದರರಾಜ್, ಸುದರ್ಶನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾತಗಳ್ಳಿ ಬಳಿಯ ವಿಶಾಲ ಜಾಗದಲ್ಲಿ ಆಯೋಜನೆ ಸಾಧ್ಯತೆ
  • ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ಶಾಸಕ ಅಶೋಕ್ ರೈ
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ‘ಕಂಬಳ’ ಸ್ಪರ್ಧೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಅಕ್ಟೋಬರ್ 18 ಹಾಗೂ 19ರಂದು ಎರಡು ದಿನ ಆಯೋಜಿಸಲು ನಿರ್ಧರಿಸಲಾಗಿದೆ.
ಪುತ್ತೂರು ಶಾಸಕ ಅಶೋಕ್ ರೈ ಶುಕ್ರವಾರ ವಿಜಯನಗರ 1ನೇ ಹಂತ ಹಾಗೂ ಸಾತಗಳ್ಳಿ ಸಮೀಪದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಅದರಲ್ಲಿ ಸಾತಗಳ್ಳಿ ವಿಟಿಯು ಕಾಲೇಜು ಬಳಿಯ ಮೈಸೂರು ಅಭಿವೃದ್ಧಿ ಪ್ರಾಧಿಕಾರದ 23 ಎಕರೆ ವಿಶಾಲ ಜಾಗದಲ್ಲಿ ಬಹುತೇಕ ನಡೆಯುವ ಸಾಧ್ಯತೆ ಇದೆ.
ಸ್ಥಳ ವೀಕ್ಷಣೆಯಲ್ಲಿ ರಾಜ್ಯ ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯ್ ಕುಮಾರ್, ಡಿಸಿಪಿಗಳಾದ ಹರ್ಷಾ ಪ್ರಿಯಂವದಾ, ಸುಂದರರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸುದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾತಗಳ್ಳಿ ಬಳಿ ಆಯೋಜನೆ ಸಾಧ್ಯತೆ ಹೆಚ್ಚು..?

ಕಂಬಳ ನಡೆಸಲು ಕನಿಷ್ಠ 20 ಎಕರೆ ವಿಶಾಲ ಜಾಗದ ಅಗತ್ಯತೆ ಹಾಗೂ ಕಂಬಳ ಟ್ರ್ಯಾಕ್ ನಿರ್ಮಾಣಕ್ಕೆ ಮೂರು ತಿಂಗಳು ಸಮಯಾವಕಾಶ ಬೇಕಾಗಿದೆ. ಹಾಗಾಗಿ, ಸಾತಗಳ್ಳಿ ಬಳಿಯ ಎಂಡಿಎ ಜಾಗ ವಿಶಾಲವಾಗಿದೆ. ಜತೆಗೆ ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳ ಆಯೋಜಿಸುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಏರ್ಪಟ್ಟು ಸಮಸ್ಯೆಯಾಗಲಿದೆ. ಈ ಹಿನ್ನೆಲೆ ನಗರದ ಮಧ್ಯದಲ್ಲಿರುವ ವಿಜಯನಗರದ ಬದಲಿಗೆ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಸಾತಗಳ್ಳಿಯಲ್ಲಿನ ಎಂಡಿಎ ಜಾಗದಲ್ಲಿ ನಡೆಸಲು ಕಂಬಳ ಸಮಿತಿ ಒಲವು ತೋರಿದೆ. ಅಂತಿಮವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿರ್ಧರಿಸಲಿದ್ದಾರೆ. ಈ ಪ್ರದೇಶದಲ್ಲಿ ವಾಹನಗಳ ನಿಲುಗಡೆ ಹಾಗೂ ಏಕಕಾಲದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕಂಬಳ ವೀಕ್ಷಣೆ ಮಾಡಬಹುದಾಗಿದೆ. ಕಂಬಳ ವೀಕ್ಷಣೆಗೆ ಹೊರ ಭಾಗದಿಂದ ಬರುವವರು ನಗರಕ್ಕೆ ಪ್ರವೇಶ ಪಡೆಯದೇ ರಿಂಗ್ ರಸ್ತೆಯಲ್ಲೇ ಈ ಪ್ರದೇಶದ ತಲುಪಬಹುದು. ಹಾಗಾಗಿ ದಸರಾ ಸಂದರ್ಭ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂಬಳ ಸ್ಪರ್ಧೆಗೆ ಎರಡು ಟ್ರ್ಯಾಕ್ ನಿರ್ಮಿಸಬೇಕಾಗಿದೆ. 250 ಮೀಟರ್ ಉದ್ದ, 50 ಅಡಿ ಅಗಲದ ಟ್ರ್ಯಾಕ್ ಅಗತ್ಯ ಇದೆ.

48 ಗಂಟೆ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಸ್ಪರ್ಧೆ

ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಕಳೆದ ವರ್ಷವೇ ಕಂಬಳ ನಡೆಸುವ ಉದ್ದೇಶವಿದ್ದರೂ ಅಂತಿಮ ಕ್ಷಣದಲ್ಲಿ ಸಾಧ್ಯವಾಗಿರಲಿಲ್ಲ. ಈ ಬಾರಿ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಆಯೋಜಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸಾತಗಳ್ಳಿ ಹಾಗೂ ವಿಜಯನಗರ ಬಳಿ ಸ್ಥಳ ಪರಿಶೀಲನೆ ನಡೆಸಿದ್ದು, ಇದರಲ್ಲಿ ಸಾತಗಳ್ಳಿ ಬಳಿ ವಿಶಾಲವಾದ ಜಾಗ ಇದೆ. ವಾಹನಗಳ ಪಾರ್ಕಿಂಗ್‌ಗೂ ಸೂಕ್ತ ಸ್ಥಳವಾಗಿದೆ. ಈ ಬಗ್ಗೆ ಸಿಎಂ ಅವರಿಗೆ ಸ್ಥಳದ ಕುರಿತು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ ನಡೆಸುವ ಮಾದರಿ ಹಾಗೂ ನಿಯಮವನ್ನು ಮೈಸೂರು ಕಂಬಳ ಉತ್ಸವಕ್ಕೂ ಅನ್ವಯವಾಗಲಿದ್ದು, 48 ಗಂಟೆ ಸತತ ಕಂಬಳ ಉತ್ಸವ ನಡೆಯಲಿದೆ. ನಿಗದಿತ ದಿನಾಂಕದಂದು ಬೆಳಗ್ಗೆ 9ಗಂಟೆಗೆ ಉದ್ಘಾಟನೆಗೊಳ್ಳುವ ಕಂಬಳ ಉತ್ಸವ ಎರಡು ರಾತ್ರಿ, ಎರಡು ಹಗಲು ನಿರಂತರವಾಗಿ ನಡೆಯಲಿದೆ. ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಕಂಬಳ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಸುಮಾರು 150 ರಿಂದ 200 ಜೋಡಿ ಕಂಬಳ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 8 ಸಾವಿರ ಮಂದಿ ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ವಿಐಪಿ ಹಾಗೂ ವಿವಿಐಪಿ ಪಾಸ್ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದರು.
ಕಂಬಳದ ಜತೆಗೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಆಹಾರ ಮೇಳವೂ ಆಯೋಜಿಸಲಾಗುವುದು. ವಿಜೇತ ಕೋಣಗಳಿಗೆ ಚಿನ್ನದ ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ 5 ರಿಂದ 8 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದ್ದು, ಪ್ರಾಯೋಜಕರ ಸಹಕಾರವೂ ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಂಬಳ ಕೋಣಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net