ದಸರಾ ಜಂಬೂಸವಾರಿ : ಈ ಬಾರಿ 15 ಜಿಲ್ಲೆಗಳ ಸ್ತಬ್ಧಚಿತ್ರಕ್ಕೆ ಮಾತ್ರ ಅವಕಾಶ..!

ಮೈಸೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವ ಕಾರ್ಯಾಕಾರಿ ಸಮಿತಿ ಸಭೆ ನಡೆಯಿತು. ಶಿವರಾಜ್ ತಂಗಡಗಿ, ರಮೇಶ್ ಬಂಡಿಸಿದ್ದೇಗೌಡ, ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಇದ್ದರು
ಮೈಸೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವ ಕಾರ್ಯಾಕಾರಿ ಸಮಿತಿ ಸಭೆ ನಡೆಯಿತು. ಶಿವರಾಜ್ ತಂಗಡಗಿ, ರಮೇಶ್ ಬಂಡಿಸಿದ್ದೇಗೌಡ, ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಇದ್ದರು
Published on
ಮೈಸೂರು: ಪ್ರತಿ ಬಾರಿ ಎಲ್ಲ ಜಿಲ್ಲೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳುತ್ತಿದ್ದವು. ಈ ಬಾರಿ ಆಯ್ದ 15 ಜಿಲ್ಲೆಗಳ ಸ್ತಬ್ಧಚಿತ್ರಗಳಿಗೆ ಮಾತ್ರ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ನಿರ್ಧರಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ದಸರಾ ಮಹೋತ್ಸವ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
‘‘ರಾಜ್ಯದ ಒಟ್ಟು 30 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಪೈಕಿ ಜಂಬೂ ಸವಾರಿಯಲ್ಲಿ ಭಾಗವಹಿಸುವ ಉತ್ತಮ 15 ಜಿಲ್ಲೆಯ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರ ಹಾಗೂ ಕಲಾತಂಡಗಳಿಗೆ ಜಂಬೂಸವಾರಿಯಲ್ಲಿ ಸಾಗುವಾಗ ನಿಗದಿತ ಸ್ಥಳಗಳಲ್ಲಿ ಪ್ರದರ್ಶನ ನೀಡಲು ಸಮಯ ನಿಗದಿ ಮಾಡಿ ಶಿಸ್ತುಬದ್ಧವಾಗಿ ಸಾಗಲು ವ್ಯವಸ್ಥೆ ಮಾಡಲಾಗುವುದು’’ ಎಂದು ಸಚಿವರು ತಿಳಿಸಿದರು.

ಜಂಬೂಸವಾರಿಗೆ ರಾಯಭಾರಿಗಳು:

ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಹೊರ ದೇಶಗಳಿಂದ ರಾಯಭಾರಿಗಳನ್ನು ಆಹ್ವಾನಿಸಲಾಗುತ್ತಿದ್ದು, ಈಗಾಗಲೇ ಮೂರು ದೇಶದ ರಾಯಭಾರಿಗಳು ಒಪ್ಪಿಗೆ ಸಹ ನೀಡಿದ್ದಾರೆ. ಅವರನ್ನು ಶಿಷ್ಠಾಚಾರದಂತೆ ಆಹ್ವಾನಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ದಸರಾ ಮಹೋತ್ಸವದ ಡ್ರೋಣ್ ಶೋ ಗೆ ವಿಷಯವಾರು ಮಾಡಲ್ ಸಿದ್ಧಪಡಿಸಿ ಮುಖ್ಯಮಂತ್ರಿ ಅವರಿಂದ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಲಹೆ ನೀಡಿದರು.

ವೆಬ್‌ಸೈಟ್ ಲೋಕಾರ್ಪಣೆ

ಮೈಸೂರು ದಸರಾ 2026ರ ಅಧಿಕೃತ ವೆಬ್‌ಸೈಟ್ https://mysoredasara.gov.in ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೆಬ್‌ಸೈಟ್‌ನಲ್ಲಿ ದಸರಾ ವೇಳಾಪಟ್ಟಿ, ಟಿಕೆಟ್ ಬುಕ್ಕಿಂಗ್, ಸ್ಥಳಗಳ ಮಾಹಿತಿ, ಲೈವ್ ಸ್ಟ್ರೀಮಿಂಗ್, ಮಾರ್ಗಸೂಚಿ, ತುರ್ತು ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗಿದೆ.
ಗೋಲ್ಡ್ ಕಾರ್ಡ್‌ಗೆ ನಂಬರ್
ಪ್ರತಿ ಬಾರಿ ವರ್ಷ ಗೋಲ್ಡ್ ಕಾರ್ಡ್ ಖರೀದಿಸಿದ ಸಾಕಷ್ಟು ಜನರಿಗೆ ಆಸನದ ವ್ಯವಸ್ಥೆಯೇ ದೊರೆಯುತ್ತಿರಲಿಲ್ಲ. ಈ ಸಮಸ್ಯೆ ಬಗೆಹರಿಸಲು ಗೋಲ್ಡ್ ಕಾರ್ಡ್ ಖರೀದಿ ಮಾಡಿದವರಿಗೆ ಸೀಟ್ ಸಂಖ್ಯೆ ನಮೂದಿಸಿ ಆಸನದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ಬಾರಿ ಯಾರಿಗೂ ಗೋಲ್ಡ್ ಕಾರ್ಡ್ ಉಚಿತವಾಗಿ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕಂಬಳ ನಡೆಯುವುದು ಖಚಿತ

ಕಂಬಳ ಕ್ರೀಡೆಯನ್ನು ಅ.18, 19 ರಂದು ರಂದು ಸಾತಗಳ್ಳಿಯಲ್ಲಿ ಆಯೋಜಿಸಲಾಗುವುದು. ಕಂಬಳದಲ್ಲಿ ಒಟ್ಟು 150 ಕೋಣಗಳ ತಂಡ ಜೂನಿಯರ್‌ಹಾಗೂ ಸೀನಿಯರ್ ವಿಭಾಗದಲ್ಲಿ ಭಾಗವಹಿಸಲಿದೆ. ಸಾರ್ವಜನಿಕರಿಗೆ 8000 ಆಸನದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಕಂಬಳ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಯುಕೇಶ್ ಕುಮಾರ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net