ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ದಸಂಸ ಪ್ರತಿಭಟನೆ
ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಾ.ಡಿ.ಜಿ.ಸಾಗರ ಬಣ)ವತಿಯಿಂದ ಪ್ರತಿಭಟನೆ ನಡೆಯಿತು. ಮಲ್ಲೇಶ್ ಚುಂಚನಹಳ್ಳಿ, ರಾಜಣ್ಣ ಇಟ್ನ, ಕೃಷ್ಣ ಕೊಳಘಟ್ಟ, ಸುರೇಶ್ ಯರಗನಹಳ್ಳಿ ಇನ್ನಿತರರಿದ್ದರು
ಮೈಸೂರು: ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಲಾಠಿ ಚಾರ್ಜ್ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಾ.ಡಿ.ಜಿ.ಸಾಗರ ಬಣ)ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ನ್ಯಾಯ ಕಲ್ಪಿಸುವ ಬದಲು ಹಲ್ಲೆ ಮಾಡಿರುವುದನ್ನು ಖಂಡಿಸಿದರು.
ಕೇಂದ್ರ ಸರ್ಕಾರದ ಶೈಕ್ಷಣಿಕ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿದ್ಯಾರ್ಥಿಗಳ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದ್ದಾರೆ.
ಸರ್ವಾಧಿಕಾರಿ ಧೋರಣೆ, ಧಮನಕಾರಿ ನೀತಿ ಅನುಸರಿಸಿಕೊಂಡು ಬರುತ್ತಿರುವ ಕೇಂದ್ರ ಸರ್ಕಾರವು ಶೈಕ್ಷಣಿಕ ವ್ಯವಸ್ಥೆಯ ವೈಫಲ್ಯ ಪ್ರಶ್ನಿಸಿದ ವಿದ್ಯಾರ್ಥಿ ಸಮೂಹದ ಮೇಲೆ ಅಮಾನವೀಯವಾಗಿ ವರ್ತಿಸಿದೆ ಎಂದು ಕಿಡಿಕಾರಿದರು.
ಕೇಂದ್ರ ಶಿಕ್ಷಣ ಸಚಿವರ ಬೇಜವಾಬ್ದಾರಿ ಮತ್ತು ಪರೀಕ್ಷಾ ಸಿಬ್ಬಂದಿಯ ಅಕ್ರಮದಿಂದ 2026ನೇ ಸಾಲಿನ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ನಿಗದಿತ ಪರೀಕ್ಷೆ ರದ್ದಾದ ಕಾರಣ ಲಕ್ಷಾಂತರ ವಿದ್ಯಾರ್ಥಿಗಳು ಆಘಾತಕ್ಕೆ ಒಳಗಾಗಿದ್ದರು.
ಮಾನಸಿಕ ಹಿಂಸೆಗೆ ಒಳಗಾದ 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೂ ಮಾನಸಿಕಯಾತನೆಯಲ್ಲಿದ್ದಾರೆ.
ಶಿಕ್ಷಣ ಸಚಿವರು ರಾಜೀನಾಮೆ ಸಲ್ಲಿಸಿ ಮಾದರಿಯಾಗಬೇಕಿತ್ತು. ಇದು ವಿದ್ಯಾರ್ಥಿಗಳಿಗೂ ಸಮಾಧಾನವಾಗುತ್ತಿತ್ತು. ಆದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಮೈಗೂಡಿಸಿಕೊಂಡಿರುವ ಸಚಿವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂಘಟನೆಯ ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ರಾಜಣ್ಣ ಇಟ್ನ, ಕೃಷ್ಣ ಕೊಳಘಟ್ಟ, ಸುರೇಶ್ ಯರಗನಹಳ್ಳಿ, ಗೋವಿಂದರಾಜು, ರಾಜು ನಿಲವಾಡಿ, ಪುಟ್ಟಸ್ವಾಮಿ ದೇವರಸನಹಳ್ಳಿ, ಸುರೇಶ್ ಸಂಕರಪುರ ಇನ್ನಿತರರಿದ್ದರು.
ಐಎನ್‌ಟಿಯುಸಿ ಪ್ರತಿಭಟನೆ
ನೀಟ್ ಪರೀಕ್ಷಾ ನಿರ್ವಹಣೆಯ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ (ಐಎನ್‌ಟಿಯುಸಿ) ಸದಸ್ಯರು ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು.
ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಪ್ರಶ್ನಿಸಿದವರನ್ನು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.