ಮೈಸೂರಿನ ವಿದ್ಯಾರ್ಥಿನಿಗೆ 10 ಲಕ್ಷ ರೂ.ಸೈಬರ್ ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ವಂಚಕರು ವಿದ್ಯಾರ್ಥಿನಿಯೊಬ್ಬರಿಗೆ ಹಣದ ಆಸೆ ತೋರಿಸಿ ಆನ್‌ಲೈನ್ ಮೂಲಕ ಬರೋಬ್ಬರಿ 10.17 ಲಕ್ಷ ರೂ. ವಂಚಿಸಿದ್ದಾರೆ.
ಕೆ.ಆರ್. ಮೊಹಲ್ಲಾದ ಹೊಸಬಂಡಿಕೇರಿಯ ನಿವಾಸಿ ಆರ್. ರಾಜೇಶ್ ಪುತ್ರಿ ಪಿ. ಹರ್ಷಿತಾ ಎಂಬವರೇ ಹಣ ಕಳೆದುಕೊಂಡ ವಿದ್ಯಾರ್ಥಿನಿ. ‘ಹೋಟೆಲ್, ರೆಸ್ಟೋರೆಂಟ್‌ಗಳಿಗೆ ರೇಟಿಂಗ್ ನೀಡಿ ಹಣ ಗಳಿಸಬಹುದು’ ಎಂಬ ಜಾಹೀರಾತನ್ನು ಮೇ 24 ರಂದು ಇನ್ಸ್ಟಾಗ್ರಾಮ್‌ನಲ್ಲಿ ಗಮನಿಸಿದ ಹರ್ಷಿತಾ ನಂತರ ವಂಚಕರು ಹೇಳಿದ ಹಾಗೆ ರೇಟಿಂಗ್ ನೀಡಲು ಪ್ರಾರಂಭಿಸಿದರು. ಒಂದು ರಿವ್ಯೆಗೆ 10 ರೂ. ಗಳಿಸಬಹುದು ಎಂದು ತಿಳಿಸಿದ ವಂಚಕರು ಮೊದಲ ದಿನ ಆಕೆಯ ಖಾತೆಗೆ 180 ರೂ. ಪಾವತಿಸಿದರು. ಅದೇ ದಿನ ಮತ್ತೊಂದು ಟಾಸ್ಕ್ ನೀಡಿ 200 ರೂ.ಗಳನ್ನು ನೀಡಿದರು.
ನಂತರ ಮೇ 25 ರಂದು 3ನೇ :ಆರ್ಡರ್ ಟಾಸ್ಕ್’ ನೀಡಿ 800 ರೂ. ನೀಡಿದರು. ನಂತರ ವಂಚಕರು ಲಿಂಕ್‌ವೊಂದನ್ನು ಲಾಗಿನ್ ಆಗಲು ತಿಳಿಸಿದರು. ಅವರು ತಿಳಿಸಿದಂತೆ ಲಾಗಿನ್ ಆದಾಗ ಅದು ಟ್ರೇಡಿಂಗ್ ವೆಬ್‌ಸೈಟ್ ಎಂಬುದು ಹರ್ಷಿತಾ ಅವರಿಗೆ ತಿಳಿಯಿತು. ವಂಚಕರು ನೀಡಿದ ಟ್ರೇಡಿಂಗ್ ಎಕೌಂಟ್‌ಗೆ ಮೊದಲು 1000 ರೂ., ನಂತರ 2000 ರೂ. ಜಮೆ ಮಾಡಿದರು. ಈ ಹಣಕ್ಕೆ ಲಾಭವಾಗಿ 3,900 ರೂ.ಗಳನ್ನು ಹರ್ಷಿತಾ ಖಾತೆಗೆ ಹಾಕಿದರು.
ಇದರಿಂದ ಉತ್ತೇಜಿತರಾದ ಹರ್ಷಿತಾ ನಂತರ ತಮ್ಮ ಕಾತೆಯಿಂದ 43,000 ರೂ., ತಂಗಿಯ ಖಾತೆಯಿಂದ 9,24,580 ರೂ., ತಾಯಿಯ ಖಾತೆಯಿಂದ 50 ಸಾವಿರ ರೂ.ಗಳನ್ನು ಹಾಕಿ ಮೋಸ ಹೋಗಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು: ನಗರದ ಹೆಬ್ಬಾಳ್ 2ನೇ ಹಂತದ ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ.
ನವೀನ್ ದೇವಾಂಗ್ ಅವರ ಮನೆಯಲ್ಲಿ ಕಳವು ನಡೆದಿದೆ. ದೇವಾಂಗ್ ಕುಟುಂಬದವರು ಬೆಂಗಳೂರು ಹಾಗೂ ಮೂಡಬಿದ್ರೆಗೆ ಮೇ 27 ರಂದು ತೆರಳಿದ ಸಂದರ್ಭ ಕಳವು ನಡೆದಿದೆ. ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 25 ಗ್ರಾಂ ತೂಕದ ಬೆಳ್ಳಿಯ ಬ್ರೆಸ್ಲೈಟ್, 08 ಗ್ರಾಂ ಬೆಳ್ಳಿಯ ರಿಂಗ್, 02 ಗ್ರಾಂ ಚಿನ್ನದ ಮೇಲೆ ವಜ್ರದ ಹರಳಿದ್ದ ಉಂಗುರ ಕಳುವಾಗಿದೆ. ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net