ಇರಾಕ್ ಮೇಲೆ ಅಮೆರಿಕ, ಇಸ್ರೇಲ್ ನಡೆಯುತ್ತಿರುವ ಯುದ್ಧದ ಬಿಸಿ ಅಡುಗೆ ಮನೆ, ಹೋಟೆಲ್‌ಗಳಿಗೆ ತಟ್ಟಿದೆ.
ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಂತಹ ವ್ಯತ್ಯಯವೇನು ಆಗಿಲ್ಲ. ಆದರೆ, ಹೊಸ ಸಿಲಿಂಡರ್‌ಗಾಗಿ ಬುಕ್ಕಿಂಗ್ ಮಾತ್ರ ಆಗುತ್ತಲೇ ಇಲ್ಲ. ಇದರ ಬಿಸಿ ಮನೆಗಳಲ್ಲಿನ ಗೃಹಿಣಿಯರು, ಹೋಟೆಲ್‌ಗಳ ಮಾಲೀಕರು, ಕೇಟರಿಂಗ್ ಮಾಡುವವರು, ಫಾಸ್ಟ್ ಫುಡ್ ವ್ಯಾಪಾರಿಗಳಿಗೆ ತಟ್ಟಿದೆ.
ಕೊಲ್ಲಿ ದೇಶಗಳಿಂದ ದೇಶಕ್ಕೆ ಬರಬೇಕಿದ್ದ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ಯುದ್ಧದ ಬಿಸಿ ಅಡುಗೆ ಮನೆಗೂ ತಟ್ಟಿದೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಹೊಸದಾಗಿ ಬುಕ್ಕಿಂಗ್ ಮಾತ್ರ ಆಗುತ್ತಿಲ್ಲ. ಇದೊಂದು ರೀತಿಯಲ್ಲಿ ಸಿಲಿಂಡರ್ ಅಭಾವ ಸೃಷ್ಟಿಸಿ ಗ್ರಾಹಕರನ್ನು ಕಂಗಾಲು ಮಾಡಿದೆ.
ಗ್ಯಾಸ್ ಪೂರೈಕೆಯಲ್ಲಿ ಅಡೆತಡೆ
ಸರ್ಕಾರಿ ಕಂಪನಿಗಳಾದ ಇಂಡೇನ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್), ಭಾರತ್ ಗ್ಯಾಸ್ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.) ಮತ್ತು ಎಚ್‌ಪಿ ಗ್ಯಾಸ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.) ಸಂಸ್ಥೆಗಳು ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಪೂರೈಕೆ ಮಾಡುತ್ತಿವೆ.
ಯುದ್ಧ ಶುರುವಾದ ಬಳಿಕ ಗ್ಯಾಸ್ ಪೂರೈಕೆಯಲ್ಲಿ ಅಡೆತಡೆ ಎದುರಾಗಿದೆ. ಗ್ಯಾಸ್ ಕಂಪನಿಗಳ ನಿರ್ದಿಷ್ಟ ಫೋನ್ ನಂಬರ್ ಸ್ತಬ್ಧಗೊಂಡಿದೆ. ಗ್ರಾಹಕರು ಎಷ್ಟು ಸಲ ಕರೆ ಮಾಡಿದರೂ ಸ್ವೀಕಾರವಾಗುತ್ತಿಲ್ಲ. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬರುತ್ತಿಲ್ಲ. ಹೀಗಾಗಿ, ಹೊಸ ಬುಕ್ಕಿಂಗ್ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹಳೇ ಗ್ಯಾಸ್ ಸಿಲಿಂಡರ್ ಖಾಲಿಯಾಗಿ ಹೊಸ ಸಿಲಿಂಡರ್‌ಗಾಗಿ ಕಾಯುತ್ತಿರುವ ಗ್ರಾಹಕರು ಪರದಾಡುತ್ತಿದ್ದಾರೆ.
‘ಸಿಲಿಂಡರ್ ಖಾಲಿಯಾಗಿದ್ದು, ಹೊಸ ಸಿಲಿಂಡರ್‌ಗಾಗಿ ಇಂಡೇನ್ ಬುಕ್ಕಿಂಗ್ ನಂಬರ್ ಆಗಿರುವ 7718955555 ಮೊಬೈಲ್ ಸಂಖ್ಯೆಗೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಕರೆ ಮಾಡುತ್ತಿದ್ದು, ಅದು ರಿಂಗಣಿಸುತ್ತಿಲ್ಲ. ಯಾವುದೇ ಸ್ಪಂದನೆಯೂ ಇಲ್ಲವಾಗಿದೆ. ಏನು ಮಾಡಬೇಕೋ ಗೊತ್ತಾಗುತ್ತಿಲ್ಲ. ಹೀಗಾಗಿ, ಎಲೆಕ್ಟ್ರಿಕ್ ಸ್ಟೌ ಮೊರೆ ಹೋಗಿದ್ದು, ಅದರಲ್ಲೇ ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದೇವೆ. ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಗುತ್ತದೆಯೇ? ಅದು ನಮಗೆ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ’ ಎಂದು ಅಳಲು ತೋಡಿಕೊಂಡರು ದಟ್ಟಗಳ್ಳಿಯ ನಿವಾಸಿ ಆರ್.ರೂಪಾ.
ಸಿಲಿಂಡರ್‌ಗಾಗಿ ನೋಂದಣಿಯಾಗುತ್ತಿಲ್ಲ.
ಆಯಾಯ ಕಂಪನಿಗಳ ಸಿಲಿಂಡರ್ ವಿತರಕರ ಅಂಗಡಿಗಳಿಗೆ ಸಂಪರ್ಕಿಸಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ‘ಇಂಡೇನ್ ಕಂಪನಿಯ ಬುಕ್ಕಿಂಗ್ ನಂಬರ್‌ಗೆ ರಾತ್ರಿ 10ರಿಂದ ಬೆಳಗ್ಗೆ 6ರ ಒಳಗೆ ಕರೆ ಮಾಡಿ ಹೊಸ ಸಿಲಿಂಡರ್ ನೋಂದಾಯಿಸಿಕೊಳ್ಳಿ. ಇಲ್ಲವೇ ಯುಪಿಐ ಆಧಾರಿತ ಡಿಜಿಟಲ್ ಪಾವತಿ ಅಪ್ಲೀಕೇಷನ್‌ಗಳಾದ ಫೋನ್ ಪೇ, ಗೂಗಲ್ ಪೇ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಿ’ ಎಂದು ಬೋಗಾದಿ ಶ್ರೀ ಮಂಜುನಾಥ ಗ್ಯಾಸ್ ಏಜೆನ್ಸಿಯವರು ತಿಳಿಸಿದ್ದಾರೆ. ಆದರೆ, ಇದು ಸಹ ಫಲ ಕೊಡುತ್ತಿಲ್ಲ. ಈ ಆನ್‌ಲೈನ್ ವೇದಿಕೆಯಲ್ಲೂ ಹೊಸ ಸಿಲಿಂಡರ್‌ಗಾಗಿ ನೋಂದಣಿಯಾಗುತ್ತಿಲ್ಲ.
ಮೈಸೂರು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಗ್ರಾಹಕರು ಪರದಾಡುತ್ತಿದ್ದಾರೆ. ಎಚ್.ಡಿ.ಕೋಟೆ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ. ಹಾಗಾಗಿ ಹಲವೆಡೆ ಸೌದೆ ಒಲೆ ಬಳಕೆ ಮಾಡಲು ಜನರು ಮುಂದಾಗಿದ್ದಾರೆ.
ಜನರು ಭೀತಿಗೆ ಒಳಗಾಗಿ ಎಲ್‌ಪಿಜಿ ಸಿಲಿಂಡರ್ ಖರೀದಿಸಲು ಮುಂದಾಗುವ ಅಗತ್ಯ ಇಲ್ಲ.
ಎಂದಿನಂತೆ ಎರಡೂವರೆ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಸುವ ಕೆಲಸ ನಡೆದಿದೆ. ತಪ್ಪು ಮಾಹಿತಿಯ ಕಾರಣದಿಂದಾಗಿ ಕೆಲವರು ಭೀತಿಗೆ ಒಳಗಾಗಿ ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಮುಂದಾಗಬಾರದು. ಗ್ರಾಹಕರು ಭೀತಿಗೆ ಒಳಗಾಗಿ ಸಿಲಿಂಡರ್ ಬುಕ್ ಮಾಡಬೇಕಾದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವಾಸ್ತವ ಪರಿಸ್ಥಿತಿ ಭಿನ್ನವಾಗಿದೆ.
ಹೋಟೆಲ್‌ಗಳು ಬಂದ್
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಬಹುತೇಕ ಸ್ತಬ್ಧವಾಗಿದೆ. ಇದರಿಂದ ಮೈಸೂರು ನಗರ, ಗ್ರಾಮಾಂತರ ಪ್ರದೇಶದ ಬಹಳಷ್ಟು ಹೋಟೆಲ್‌ಗಳು ಬಂದ್ ಆಗಿವೆ.
‘ಗ್ಯಾಸ್ ಸಿಲಿಂಡರ್ ಸಮಸ್ಯೆ ಕಾಡುತ್ತಿದ್ದು ಪೂರೈಕೆ ನಿಂತಿದೆ. ಇದರಿಂದ ಹೋಟೆಲ್ ನಡೆಸುವುದು ಕಷ್ಟಕವಾಗಿದೆ. ಹೀಗಾಗಿ, ಬಹಳಷ್ಟು ಹೋಟೆಲ್‌ಗಳು ಸ್ಥಗಿತಗೊಂಡಿವೆ. ಇದು ಅತಿಥಿ ಉದ್ಯಮ ಕ್ಷೇತ್ರಕ್ಕೆ ದೊಡ್ಡ ನಷ್ಟ ಅಷ್ಟೇ ಅಲ್ಲ, ಗ್ರಾಹಕರೊಂದಿಗೆ ಸಂಪರ್ಕವೇ ಕುಸಿದು ಹೋಗಲಿದೆ.
ಹೀಗಾದರೆ ಮತ್ತೆ ಗ್ರಾಹಕರನ್ನು ಆಕರ್ಷಿಸುವುದು ಕಷ್ಟಕರವಾಗಲಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ರವೀಂದ್ರ ಭಟ್ ವಿಜಯವಾಣಿಗೆ ತಿಳಿಸಿದರು.
ಕಾಳಸಂತೆಯಲ್ಲಿ ಮಾರಾಟ
ಪರಿಸ್ಥಿತಿಯ ಲಾಭವನ್ನು ಖಾಸಗಿ ಗ್ಯಾಸ್ ಸಿಲಿಂಡರ್ ಕಂಪನಿಗಳು ಮಾಡಿಕೊಳ್ಳುತ್ತಿವೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಕಾಏಕಿ ಎರಡು ಪಟ್ಟು ಏರಿಕೆ ಮಾಡಿ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ.
‘ಸರ್ಕಾರಿ ಕಂಪನಿಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗುತ್ತಿಲ್ಲ. ಹೀಗಾಗಿ, ಖಾಸಗಿ ಕಂಪನಿಗಳಿಂದ ಹಾಕಿಸಿಕೊಳ್ಳುತ್ತಿದ್ದೇವೆ. 17 ಕೆಜಿ ಸಿಲಿಂಡರ್‌ಗೆ ಇದ್ದ 1480 ರೂ. ಬೆಲೆಯನ್ನು ಹಠಾತಾಗಿ 2700 ರೂ.ಗೆ ಹೆಚ್ಚಿಸಿದ್ದಾರೆ. ಇಂಡೇನ್ ಕಂಪನಿಯ 19 ಕೆಜಿ ಸಿಲಿಂಡರ್‌ಗೆ 1940 ರೂ. ಕೊಡುತ್ತಿದ್ದವು.
ಆದರೀಗ ದೊಡ್ಡ ಮೊತ್ತವನ್ನೇ ಗ್ಯಾಸ್‌ಗಾಗಿಯೇ ಕೊಡುವಂತಾಗಿದೆ. ಕೆಲ ಆರ್ಡರ್‌ಗಳಿವೆ. ಹೀಗಾಗಿ, ದುಬಾರಿ ಬೆಲೆಗೆ ಸಿಲಿಂಡರ್ ಖರೀದಿ ಅನಿವಾರ್ಯವಾಗಿದೆ. ಮುಂದಿನ ಎರಡು-ಮೂರು ದಿನ ಪರಿಸ್ಥಿತಿ ಹೀಗೆ ಮುಂದುವರಿದರೆ ಹೋಟೆಲ್ ಬಹುತೇಕ ಬಂದ್ ಮಾಡಬೇಕಾಗುತ್ತದೆ ಎಂದು ಅಗ್ರಹಾರದ ಲಕ್ಷ್ಮೀ ಟಿಫಾನಿಸ್ ಹೋಟೆಲ್ ಮಾಲೀಕ ಮಲ್ಲೇಶ್ ತಿಳಿಸಿದರು.
ಸಿಲಿಂಡರ್ ಖಾಲಿಯಾದ ಕಾರಣಕ್ಕೆ ಮಧ್ಯಾಹ್ನ, ಸಂಜೆ ಹೊತ್ತಿಗೆ ಚಾಮುಂಡಿಪುರಂ ಸೇರಿದಂತೆ ಇನ್ನಿತರ ಕಡೆ ಕೆಲ ಹೋಟೆಲ್‌ಗಳು ಬಾಗಿಲು ಹಾಕಿದ್ದವು. ಇದರಿಂದ ಊಟ, ತಿಂಡಿಗಾಗಿ ಗ್ರಾಹಕರು ಪರದಾಡಿದರು.
ಹೋಟೆಲ್ ಮೆನು ಬದಲು
ಬಹುತೇಕ ಹೋಟೆಲ್‌ಗಳ ನಿತ್ಯ ಮೆನು ಬದಲಾಗಿದೆ. ಕೆಲ ಹೋಟೆಲ್‌ಗಳಲ್ಲಿ ಉದ್ದಿನ ವಡೆ, ಮಸಾಲೆ ದೋಸೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿ ಸೇರಿದಂತೆ ಅನಿಲ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳ ತಯಾರಿಕೆಯನ್ನೇ ಕೈಬಿಟ್ಟಿವೆ.
ಇದರಿಂದ ಹೋಟೆಲ್‌ಗಳಿಗೆ ಶೇ.20ರಿಂದ 30 ಆದಾಯ ಕುಸಿಯುವ ಸಾಧ್ಯತೆ ಇದೆ. ಕಡಿಮೆ ಅನಿಲ ಬಳಸಿ ಮಾಡುವ ಚಿತ್ರಾನ್ನ, ಪುಲಾವ್, ಬಿಸಿಬೇಳೆ ಬಾತ್ ತಯಾರಿಕೆಗೆ ಆದ್ಯತೆ ಕೊಡಲಾಗಿದೆ.
ಪಿ.ಜಿ.ಗಳಿಗೂ ತಟ್ಟಿದ ಬಿಸಿ
ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಪೇಯಿಂಗ್ ಗೆಸ್ಟ್‌ಗಳು (ಪಿಜಿ) ಸರ್ಕಾರಿ ಶಾಲೆಗಳು, ವಸತಿ ನಿಲಯಗಳು, ಕಲ್ಯಾಣಮಂಟಪಗಳಿಗೂ ಬಿಸಿ ತಟ್ಟಿದೆ. ಕೆಲ ಪಿ.ಜಿ.ಗಳಲ್ಲಿ ಹೆಚ್ಚು ಅನಿಲ ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ತೀರ್ಮಾನಿಸಲಾಗಿದೆ. ಎಲೆಕ್ಟ್ರಿಕ್ ಕುಕ್ಕರ್‌ಗಳನ್ನು ಬಳಸಲಾಗುತ್ತಿದೆ.
ಇಂಡಕ್ಷನ್ ಸ್ಟೌ ಮೊರೆ
ಸಿಲಿಂಡರ್ ಸಿಗದೆ ಪರದಾಡುತ್ತಿರುವ ಗ್ರಾಹಕರು ಮನೆಯಲ್ಲಿ ಇಂಡಕ್ಷನ್ ಸ್ಟೌ ಮೊರೆ ಹೋಗಿದ್ದಾರೆ. ಕಾಫಿ, ಟೀ, ಊಟಕ್ಕೆ ಅನ್ನ ಸಾಂಬರ್, ಮುದ್ದೆ ಮಾತ್ರ ಮಾಡಿಕೊಂಡು ದಿನ ಕಳೆಯುತ್ತಿದ್ದಾರೆ.
ದೋಸೆ, ರಾಗಿ, ಅಕ್ಕಿ ರೊಟ್ಟಿ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಮನೆಯ ಮೆನು ಸಹ ಸರಳಗೊಳಿಸಿದ್ದಾರೆ ಗೃಹಿಣಿಯರು.
"
ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಅಡುಗೆ ಅನಿಲವನ್ನು ಅಕ್ರಮವಾಗಿ ಸಂಗ್ರಹಿಸುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು.