ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಪಾಲಿಕೆ ವತಿಯಿಂದ ಕಿರು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿರು. ಶ್ರೀ ವೇಮಾನಂದ ಸ್ವಾಮೀಜಿ, ಡಾ.ಪಿ.ಶಿವರಾಜ್, ಡಾ.ಆವರೆಕಾಡು ವಿಜಯಕುಮಾರ, ಡಾ.ಎಂ.ಡಿ.ಸುದರ್ಶನ್, ಪ್ರಭಾಕರ್ ರೆಡ್ಡಿ, ಚೆನ್ನಾರೆಡ್ಡಿ, ಶಾಂತರಾಜು, ಸುರೇಶ್, ಪ್ರಸನ್ನ ಇದ್ದರು.
ಮೈಸೂರು: ಮನುಷ್ಯ ಸಮಾಜದ ಒಳಿತಿಗಾಗಿ ಜೀವನ ನಡೆಸಿದರೆ ಜನರ ಮನಸ್ಸಿನಲ್ಲಿ ದೈವತ್ವ ಭಾವನೆಯನ್ನು ಬೆಳಸಿಕೊಳ್ಳುತ್ತಾರೆ. ಮಹಾಯೋಗಿ ವೇಮನ ಅವರು ಕೂಡ ಸಮಾಜಕ್ಕೆ ಒಳಿತು ಮಾಡಿ ದೈವತ್ವ ಭಾವನೆಯನ್ನು ಬೆಳಸಿಕೊಂಡಿದ್ದರು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಪಾಲಿಕೆ ವತಿಯಿಂದ ಕಿರು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಾಯೋಗಿ ವೇಮನ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಪ ಹಾಗೂ ವರವನ್ನು ದೇವರು ಕೊಡುವುದಿಲ್ಲ. ನಾವು ಮಾಡುವ ಕಾಯಕ ನೀಡುತ್ತದೆ. ಸಮಾಜಕ್ಕೆ ಬೆಳಕಿನ ರೂಪದಲ್ಲಿ ಯಾರು ಮಾದರಿಯಾಗಿ ಬದುಕುತ್ತಾರೋ ಅಂಥವರು ಸಮಾಜಕ್ಕೆ ವರದಾನವಾಗುತ್ತಾರೆ. ಹೇಮಾರೆಡ್ಡಿ ಮಲ್ಲಮ್ಮ ಅವರು ವೇಮನನಿಗೆ ಅತ್ತಿಗೆಯಾಗಿ ಅವರ ಜೀವನಕ್ಕೆ ದಾರಿದೀಪವಾಗುತ್ತಾರೆ ಎಂದು ಹೇಳಿದರು.
ಡಾ.ಆವರೆಕಾಡು ವಿಜಯಕುಮಾರ ಮಾತನಾಡಿ, ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು ಎಂದು ಮಹಾಯೋಗಿ ವೇಮನರು ವಚನದ ಮೂಲಕ ತಿಳಿಸಿದ್ದಾರೆ. ಸಮಾಜದ ಅಂಕು ಡೊಂಕುಗಳನ್ನು ವಚನಗಳ ಮೂಲಕ ತಿದ್ದಿ ಜನರಿಗೆ ದಾರಿ ದೀಪವಾಗಿದ್ದರು. ವೇಮನ ವಚನಗಳು ಜನಸಾಮಾನ್ಯರಿಗೆ ಹಾಗೂ ಮುಂದಿನ ಭವಿಷ್ಯದ ಮಕ್ಕಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.
ಹರಿಹರ ಎರೆಹೊಸಹಳ್ಳಿಯ ಶ್ರೀ ವೇಮಾನಂದ ಸ್ವಾಮೀಜಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಪ್ರಮುಖರಾದ ಪ್ರಭಾಕರ್ ರೆಡ್ಡಿ, ಚೆನ್ನಾರೆಡ್ಡಿ, ಶಾಂತರಾಜು, ಸುರೇಶ್, ಪ್ರಸನ್ನ ಇದ್ದರು.