ಪಿಎಂ ಸೂರ್ಯ ಘರ್ ಪರಿಣಾಮಕಾರಿ ಅನುಷ್ಠಾನಕ್ಕೆ ಜಾಗೃತಿ ಮೂಡಿಸಿ: ನಿತೇಶ್ ಪಾಟೀಲ್ ಸೂಚನೆ
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಜಾಗೃತಿ ಕುರಿತು ನಿತೇಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಪೂರೈಕೆದಾರರ ಸಭೆ ಆಯೋಜಿಸಲಾಗಿತ್ತು. ಶರಣಮ್ಮ ಎಸ್. ಜಂಗಿನ, ಎಲ್. ಲೋಕೇಶ್ ಇದ್ದರು.
ಸೋಲಾರ್ ರೂಫ್ ಟಾಪ್ ಅಳವಡಿಸಿಕೊಂಡರೆ ವಾರ್ಷಿಕವಾಗಿ ಅಂದಾಜು ಕನಿಷ್ಠ 25 ಸಾವಿರ ರೂ. ಉಳಿತಾಯವಾಗುವ ಸಾಧ್ಯತೆ ಇದೆ
ಜನರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಹೆಚ್ಚು ಗ್ರಾಹಕರು ಯೋಜನೆಯ ಬಳಕೆಗೆ ಮುಂದಾಗುವಂತೆ ಜಾಗೃತಿ ಮೂಡಿಸಬೇಕು
ಮೈಸೂರು:ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರೂ ಆದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯನಗರ ಎರಡನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಪೂರೈಕೆದಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಕುರಿತು ಹೆಚ್ಚಿನ ಗ್ರಾಹಕರು ಯೋಜನೆಯ ಸೌಲಭ್ಯ ಪಡೆಯುವಂತೆ ಅಧಿಕಾರಿಗಳು ಹಾಗೂ ಪೂರೈಕೆದಾರರು(ವೆಂಡರ್‌ಗಳು) ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
2024ರಲ್ಲಿ ಯೋಜನೆ ಆರಂಭವಾಗಿದ್ದರೂ ಈವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಂದಿಲ್ಲ. ವಿದ್ಯುತ್ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಂಡರೆ ವಾರ್ಷಿಕವಾಗಿ ಅಂದಾಜು ಕನಿಷ್ಠ 25 ಸಾವಿರ ರೂ. ಉಳಿತಾಯವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಸರ್ಕಾರದಿಂದ ಸಬ್ಸಿಡಿ ಸೌಲಭ್ಯವಿದ್ದು, ಯೋಜನೆ ಗ್ರಾಹಕರಿಗೆ ಲಾಭದಾಯಕವಾಗಿದೆ. ಈ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಹೆಚ್ಚು ಗ್ರಾಹಕರು ಯೋಜನೆಯ ಬಳಕೆಗೆ ಮುಂದಾಗುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಗ್ರಾಹಕರಿಗೆ ವೆಂಡರ್‌ಗಳ ಮಾಹಿತಿ ಸುಲಭವಾಗಿ ದೊರೆಯುವ ವ್ಯವಸ್ಥೆ ಆಗಬೇಕಿದೆ. ಇದರಿಂದಾಗಿ ಗ್ರಾಹಕರು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ವೆಂಡರ್‌ಗಳ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೋಲಾರ್ ರೂಫ್ ಟಾಪ್ ಅಳವಡಿಕೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಕೂಡಲೇ ಸೆಸ್ಕ್ ಅಧಿಕಾರಿಗಳು ಅರ್ಜಿ ಪರಿಶೀಲಿಸುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಕೆಲವು ಗ್ರಾಹಕರು ವೆಂಡರ್ ಆಯ್ಕೆ ಮಾಡದೆ ಇರುವುದರಿಂದ ಅವರಿಗೆ ಯೋಜನೆ ಕುರಿತು ಸಮರ್ಪಕ ಅರಿವು ಇಲ್ಲದಿರುವುದು ಕಂಡುಬರುತ್ತಿದೆ. ಅಂತಹ ಗ್ರಾಹಕರನ್ನು ಸಂಪರ್ಕಿಸಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ನಗರಪಾಲಿಕೆ, ಜಿಲ್ಲಾಡಳಿತ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸಬೇಕು. ಸಂಭಾವ್ಯ ಗ್ರಾಹಕರನ್ನು ಭೇಟಿಯಾಗಿ, ವೆಂಡರ್‌ಗಳು, ಯೋಜನೆಯ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ವೆಂಡರ್‌ಗಳು ಅರ್ಜಿ ಪರಿಶೀಲನೆಯಾದ ಐದು ದಿನಗಳಲ್ಲಿ ಸ್ಮಾರ್ಟ್‌ಮೀಟರ್ ಸೇರಿದಂತೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮುಗಿಸಬೇಕು ಎಂದರು.
ಸೆಸ್ಕ್ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ, ಮುಖ್ಯ ಇಂಜಿನಿಯರ್ ಎಲ್. ಲೋಕೇಶ್, ಅಧೀಕ್ಷಕ ಇಂಜಿನಿಯರ್‌ಗಳಾದ ಸುನೀಲ್ ಕುಮಾರ್, ಸೋಮಶೇಖರ್, ಪ್ರಧಾನ ವ್ಯವಸ್ಥಾಪಕರಾದ ಎಚ್.ಆರ್. ದಿನೇಶ್, ಆರ್. ರಾಮಸ್ವಾಮಿ ಇತರರಿದ್ದರು.
ಯೋಜನೆ ಪ್ರಚಾರಕ್ಕೆ ಸೋಲಾರ್ ತಿಂಗಳು ಆಚರಣೆ
ಸಾರ್ವಜನಿಕರಲ್ಲಿ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸಿ, ಪ್ರಚಾರ ಮಾಡುವ ಉದ್ದೇಶದಿಂದ 2026ರ ಮೇ ತಿಂಗಳನ್ನು ‘ಸೋಲಾರ್ ತಿಂಗಳು’ ಆಚರಿಸಲಾಗುತ್ತಿದೆ ಎಂದು ನಿತೇಶ್ ಪಾಟೀಲ್ ತಿಳಿಸಿದರು.
ಬೇಸಿಗೆಯಲ್ಲಿ ಸೂರ್ಯ ಕಿರಣದ ಪ್ರಮಾಣ ಹೆಚ್ಚಿರುವ ಹಿನ್ನೆಲೆ, ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ನಿರ್ದೇಶನದಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಆ ಮೂಲಕ ಪಿಎಂ ಸೂರ್ಯಘರ್ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳ ನೋಂದಣಿ, ಗರಿಷ್ಠ ಸಂಖ್ಯೆಯ ಸೋಲಾರ್ ರೂಫ್ ಟಾಪ್ ಘಟಕಗಳ ಅನುಷ್ಠಾನ, ಸ್ಥಳ ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸುವುದು ಹಾಗೂ ಹೊಸ ವೆಂಡರ್‌ಗಳ ನೋಂದಣಿ ಅಂಶಗಳ ಮೇಲೆ ವಿಶೇಷ ಒತ್ತು ನೀಡಲು ಸೂಚಿಸಲಾಗಿದೆ. ಯೋಜನೆ ಕುರಿತ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಸಂಖ್ಯೆ ಅಥವಾ ಹತ್ತಿರದ ಸೆಸ್ಕ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.