ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಎಸ್‌ಐಆರ್ ವಿಚಾರವಾಗಿ ಸೋಮವಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿಗೆ ದೂರು ಸಲ್ಲಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಆರ್.ರಘು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್ ಇದ್ದರು.
ಮೈಸೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಜಿಲ್ಲಾಧಿಕಾರಿಗೆ ದೂರು ನೀಡಿದೆ.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಭೇಟಿ ಮಾಡಿದ ನಿಯೋಗ ಲೋಪ-ದೋಷ ಬಗ್ಗೆ ಗಮನ ಸೆಳೆಯಿತು.
ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ ಎಂಟು ವಾರ್ಡ್‌ಗಳಲ್ಲಿ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಮೀನಾ ಬಜಾರ್‌ನಲ್ಲಿ ಬಿಜೆಪಿಗೆ ಬೂತ್ ಏಜೆಂಟ್‌ಗಳು ಇಲ್ಲ. ಏಜೆಂಟ್‌ಗಳನ್ನು ನೇಮಕ ಮಾಡಿದರೆ ಅವರಿಗೆ ಬೆದರಿಕೆಗಳು ಬರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಏಜೆಂಟ್‌ಗಳನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಎಸ್‌ಐಆರ್ ಪ್ರಕ್ರಿಯೆಯನ್ನು ನಾವು ಹೇಗೆ ಪರಿಶೀಲನೆ ಮಾಡಬೇಕು. ಆಕ್ಷೇಪಣೆಗಳನ್ನು ಹೇಗೆ ವ್ಯಕ್ತಪಡಿಸಬೇಕು. ಜಿಲ್ಲಾಡಳಿತ ನಮಗೆ ಸಹಾಯ ಮಾಡಿ, ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಿಯಮ ಪ್ರಕಾರ, ಬಿಎಲ್‌ಒಗಳು ಮನೆ ಮನೆಗೆ ಹೋಗಿ ಫಾರ್ಮ್ ಹಂಚಬೇಕು. ಎಆರ್‌ಒ, ಬಿಆರ್‌ಒ ಎಲ್ಲರಿಗೂ ಇದೇ ರೀತಿಯ ನಿರ್ದೇಶನ ಇದೆ. ಮನೆ-ಮನೆಗೆ ತೆರಳುವುದಿಲ್ಲ ಎನ್ನುವುದು ಗೊತ್ತಾದರೆ ಸಂಬಂಧಪಟ್ಟ ಬಿಎಲ್‌ಒ ಸೂಪರ್‌ವೈಸರ್ ಅಥವಾ ಬಿಎಲ್‌ಒಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಲಾಗುತ್ತದೆ. ಒಂದು ವೇಳೆ ಚುನಾವಣಾ ಆಯೋಗದ ನಿಯಮ ಮೀರಿ ಕೆಲಸ ಮಾಡುತ್ತಿದ್ದರೆ ಅಂತಹ ಬಿಎಲ್‌ಒಗಳ ಮೇಲೆ ಖಂಡಿತವಾಗಿಯೂ ಕ್ರಮ ತಗೊಳ್ಳುತ್ತೇವೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಆರ್.ರಘು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಸಂದೇಶ್‌ಸ್ವಾಮಿ, ಮೋಹನ್, ಮಹೇಶ್ ರಾಜೇ ಅರಸ್ ಇತರರಿದ್ದರು.
ಭಾರತೀಯ ಮತದಾರರು ಉಳಿಯುವುದು ಮುಖ್ಯ
ಸೂಕ್ಷ್ಮ ವಾರ್ಡ್‌ಗಳಲ್ಲಿ ಎಸ್‌ಐಆರ್ ವಿಚಾರವಾಗಿ ಸೂಕ್ತವಾದಂತಹ ಕ್ರಮ ತಗೆದುಕೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ಮತದಾರರು ಯಾರು ಅಂತಹರವನ್ನು ಉಳಿಸುವ ಹಾಗೂ ಅನರ್ಹ ಮತದಾರರನ್ನು ತೆಗೆಯಿಸಿ ಹಾಕುವ ಕೆಲಸ ಸಮರ್ಪಕವಾಗಿ ಆಗಬೇಕಾಗಿದೆ. ನಮ್ಮ ಮುಂದೆ ಇರುವುದು ಆ ಮತದಾರರು, ಈ ಮತದಾರರು ಎನ್ನುವ ಪ್ರಶ್ನೆಯಲ್ಲ. ಭಾರತೀಯ ಮತದಾರರನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ಮನವಿ ಮಾಡಿದರು.
ಬಿಎಲ್‌ಎಗಳ ನೇಮಕ ಮಾಡದಿರುವ ಕಡೆಯಲ್ಲಿ ಒಂದೇ ಜಾಗದಲ್ಲಿ ಕುಳಿತು ಇಎಫ್ ನಮೂನೆ ಸ್ವೀಕರಿಸುತ್ತಿರುವ ಕಡೆಗಳಿಗೆ ಪೊಲೀಸ್ ರಕ್ಷಣೆಯಲ್ಲಿ ಬಿಎಲ್‌ಎಗಳನ್ನು ಕರೆದುಕೊಂಡು ಹೋಗಿ ವಿಶ್ವಾಸ ತುಂಬಬೇಕಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಪಕ್ಷದಿಯಿಂದ ಕಾನೂನು ಘಟಕಗಳು ಇವೆ. ಅವುಗಳಲ್ಲೂ ಇದರ ಬಗ್ಗೆ ಅಭಿಪ್ರಾಯ ಕೇಳಲಾಗಿದೆ ಎಂದರು.
ಇದು ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತಹ ಪ್ರಕ್ರಿಯೆಯಾಗಿದೆ. ಇದು ಹೋರಾಟ ಅಲ್ಲ. ನಾವು ಎಲ್ಲ ಕಡೆಯಲ್ಲೂ ಅಕ್ರಮಣಕಾರಿ ಅಥವಾ ಮೆದುವಾಗಿ ಹೋಗುವಂತಹ ಪ್ರಕ್ರಿಯೆ ಅಲ್ಲ. ನಮಗೆ ಸುಮಾರು ಮೂರು ದಶಕಗಳಿಂದ ಯಾವುದೇ ರೀತಿ ಒಂದು ಬೂತ್ ಏಜೆಂಟ್ ಹಾಗೂ ಇತ್ಯಾದಿ ಯಾವುದನ್ನೂ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ. ಅಂತಹ ಬೂತ್‌ಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆಗುತ್ತಾ ಇರುವ ಸಂದರ್ಭದಲ್ಲಿ, ನಮಗೆ ಪರಿಶೀಲನೆ ಮಾಡುವ ಹಕ್ಕಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಎಸ್‌ಐಆರ್ ಕುರಿತು ಮತದಾರರಿಗೆ ಮಾಹಿತಿ ನೀಡಲು ನಮ್ಮ ಪಕ್ಷದ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆ ತೆರೆಯಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ, ಗ್ರಾಮೀಣ ಭಾಗದಲ್ಲೂ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.