ಪಿರಿಯಾಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ಆಯೋಜಿಸಿದ್ದ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಧನುರಾಜ್ ಮಾತನಾಡಿದರು. ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಇತರರು ಇದ್ದಾರೆ.
ಪಿರಿಯಾಪಟ್ಟಣ: ವಕೀಲರು ಉತ್ತಮ ಸಹಕಾರ ನೀಡಿದರೆ ಶೀಘ್ರವಾಗಿ ನ್ಯಾಯದಾನ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಧನುರಾಜ್ ತಿಳಿಸಿದರು.
ಪಟ್ಟಣದ ವಕೀಲರ ಭವನದಲ್ಲಿ ಸೋಮವಾರ ನೂತನ ನ್ಯಾಯಾಧೀಶರಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಕಾರ್ಯನಿರ್ವಹಿಸಿದ ಎಲ್ಲ ಕಡೆಗಳಲ್ಲಿ ವಕೀಲರು ಅಗತ್ಯ ಸಹಕಾರ ನೀಡಿದ್ದಾರೆ. ಇಲ್ಲಿಯೂ ಕೂಡ ಅದೇ ಸಹಕಾರವನ್ನು ನಿರೀಕ್ಷಿಸುತ್ತಿದ್ದೇನೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ಎಸ್.ವಿದ್ಯಾ ಮಾತನಾಡಿ, ಬಾರ್ ಅಂಡ್ ಬೆಂಚ್ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಆದ್ದರಿಂದ, ಯಾವುದೇ ಸಂಘರ್ಷ ವಾಗದರೀತಿ ಸಹಕಾರ ನೀಡುವಂತೆ ವಕೀಲರ ಸಂಘಕ್ಕೆ ಮನವಿ ಮಾಡಿದರು.
ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಮಾತನಾಡಿ, ಪಿರಿಯಾಪಟ್ಟಣ ಚಿಕ್ಕ ವಕೀಲರ ಸಂಘವನ್ನು ಹೊಂದಿದ್ದರೂ ವಕೀಲರು ಸಹೋದರರಂತೆ ಪ್ರೀತಿ ತೋರಿಸಿ ಕೆಲಸ ಮಾಡಲು ಸಹಕಾರ ನೀಡುತ್ತಿದ್ದಾರೆ. ಅದೇ ಸಹಕಾರವನ್ನು ಕಾರ್ಯನಿರ್ವಹಿಸಲು ಹೊಸದಾಗಿ ಆಗಮಿಸಿರುವ ನ್ಯಾಯಾಧೀಶರುಗಳಿಗೂ ನೀಡುತ್ತಾರೆ ಎಂದು ಭರವಸೆ ಇದೆ ಎಂದರು.
ಹಿರಿಯ ವಕೀಲ ಗೋವಿಂದ ಗೌಡ ಮಾತನಾಡಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಉಪಾಧ್ಯಕ್ಷ ಚಂದ್ರೇಗೌಡ, ಸರ್ಕಾರಿ ಸಹಾಯಕ ಅಭಿಯೋಜಕರುಗಳಾದ ಶಿವಶಂಕರ್ ಗಾವಂಕರ್, ಜಾನಕಿ, ಉಮಾ ಇದ್ದರು.