ಬಡವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ಅವಶ್ಯ

ಹುಣಸೂರು ನಗರದ ಅಂಬೇಡ್ಕರ್‌ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಎಸಿಎಫ್ ಲಕ್ಷ್ಮೀಕಾಂತ್, ಕೆ.ಹೊಂಗಯ್ಯ, ವಿಠಲ್, ಗಿರೀಶ್ ಇತರರಿದ್ದರು.
ಹುಣಸೂರು ನಗರದ ಅಂಬೇಡ್ಕರ್‌ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಎಸಿಎಫ್ ಲಕ್ಷ್ಮೀಕಾಂತ್, ಕೆ.ಹೊಂಗಯ್ಯ, ವಿಠಲ್, ಗಿರೀಶ್ ಇತರರಿದ್ದರು.
Published on
ಹುಣಸೂರು : ಅಸಹಾಯಕರಿಗಾಗಿ ಸಹಾಯಹಸ್ತ ಚಾಚುವ ಕೈಗಳು ಸಾಕಷ್ಟಿದ್ದು, ಸಹಕಾರವನ್ನು ಸದ್ಬಳಕೆ ಮಾಡಿಕೊಳ್ಳುವ ಮನೋಭಾವ ಸಹಾಯ ಪಡೆದವರು ಹೊಂದಿರಬೇಕು ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀ ಕಾಂತ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ರಾಜ್ಯ ಅರಣ್ಯಾಧಾರಿತ ಆದಿವಾಸಿ ಅಭಿವೃದ್ಧಿ ಸಂಸ್ಥೆಯಿಂದ ಅಳಿವಿನಂಚಿನಲ್ಲಿರುವ ಆದಿವಾಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮತ್ತು ಪೋಕ್ಸೋ ಮತ್ತು ಬಾಲ್ಯವಿವಾಹ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗರಹೊಳೆ ಹುಲಿ ಸಂರಕ್ಷಿತ ಯೋಜನೆಯ ಟೈಗರ್ ಫೌಂಡೇಶನ್‌ನಿಂದ ಆದಿವಾಸಿ ಬಡವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿವೇತನ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅಗತ್ಯವುಳ್ಳ ವಿದ್ಯಾರ್ಥಿಗಳು ನೇರವಾಗಿ ಇಲಾಖೆಯ ಕಚೇರಿಗೆ ಬಂದು ದಾಖಲೆಗಳನ್ನು ಒದಗಿಸಿ ಸೌಲಭ್ಯ ಪಡೆಯಬಹುದಾಗಿದೆ. ಸಮಾಜದಲ್ಲಿ ಕಷ್ಟದಲ್ಲಿದ್ದವರಿಗೆ ಸಹಕಾರ ನೀಡಲು ಅದೃಶ್ಯ ಕೈಗಳು ಸಾಕಷ್ಟಿವೆ. ಅವುಗಳ ಸದ್ಬಳಕೆ ಆಗಿಸುವ ಜವಾಬ್ದಾರಿ ಸಮಾಜದ್ದಾಗಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದು ಶಿಕ್ಷಣ ಮಾತ್ರ. ಹಾಗಾಗಿ ಶೋಷಿತ ಸಮಾಜದ ಯುವಕರು ವಿದ್ಯಾವಂತರಾಗುವ ಮೂಲಕ ಸಮುದಾಯದ ಸದೃಢ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್ ಮಾತನಾಡಿ, ಆದಿವಾಸಿಗಳಲ್ಲಿ ಬಾಲ್ಯವಿವಾಹ ಪದ್ಧತಿಯ ಕರಿನೆರಳು ಆಗಾಗ ಕಾಣಿಸಿಕೊಳ್ಳುತ್ತಿದೆ. ನಾಗರಿಕ ಸಮಾಜದಲ್ಲಿ ಇದು ಅಪರಾಧವಾಗಿದ್ದು, ಪೋಕ್ಸೋದಂತಹ ಕಠಿಣ ಕಾನೂನುಗಳು ಇವೆ. ಪ್ರಾಪ್ತ ವಯಸ್ಸನ್ನು ಸರ್ಕಾರ ಗುರುತಿಸಿದ್ದು, ಅದರಂತೆ ವಿವಾಹ ಮಾಡಬೇಕಿದೆ. ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ಆದಿವಾಸಿ ವಿದ್ಯಾವಂತರು ಆಧುನಿಕ ಆಲೋಚನೆಹೊಂದಿ ಸಮುದಾಯದ ಏಳಿಗೆಗೂ ಶ್ರಮಿಸಬೇಕಿದೆ ಎಂದರು.
ಹುಣಸೂರು ಉಪವಿಭಾಗದ ಡಿವೈಎಸ್‌ಪಿ ರವಿ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯಕ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಡಾಕ್ಟರ್ ರವಿಕುಮಾರ್, ಸಂಸ್ಥೆಯ ಗೌರಾಧ್ಯಕ್ಷ ಜೆ.ಕೆ.ಮುತ್ತಮ್ಮ, ಉಪಾಧ್ಯಕ್ಷ ವಿಠಲ್, ಕಾರ್ಯದರ್ಶಿ ಬಿ.ಸಿ.ಗಿರೀಶ್, ಹಾಡಿಯ ಮುಖಂಡರಾದ ಅಯ್ಯನಕೆರೆ ಶಿವಣ್ಣ, ಪಾರ್ವತಿ, ಜೆ.ಬಿ.ಬೋಜಮ್ಮ, ಮಣಿಕಂಠ, ಬಲ್ಲೇನಹಳ್ಳಿ ಕೆಂಪರಾಜು, ರೈತ ಸಂಘದ ಮುಖಂಡರಾದ ರಘು, ಎಚ್.ಡಿ.ಕೋಟೆ ಆದಿವಾಸಿ ಮುಖಂಡರಾದ ಮೇಟಿಕುಪ್ಪೆ ಕಾಳಪ್ಪ, ಕೆಂಡಗಣ್ಣ ಸ್ವಾಮಿ, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net