ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸಿ

ತಿ.ನರಸೀಪುರದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಎಎಸ್‌ಪಿ ಸಿ.ಮಲ್ಲಿಕ್ ಉದ್ಘಾಟಿಸಿದರು. ಜಿ.ಎಸ್.ರಘು, ಧನಂಜಯ, ಟಿ.ಎಸ್.ಬಸವಣ್ಣಸ್ವಾಮಿ ಇತರರು ಇದ್ದರು.
ತಿ.ನರಸೀಪುರದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಎಎಸ್‌ಪಿ ಸಿ.ಮಲ್ಲಿಕ್ ಉದ್ಘಾಟಿಸಿದರು. ಜಿ.ಎಸ್.ರಘು, ಧನಂಜಯ, ಟಿ.ಎಸ್.ಬಸವಣ್ಣಸ್ವಾಮಿ ಇತರರು ಇದ್ದರು.
Published on

ಜಿಲ್ಲಾ ಪೊಲೀಸ್ ಅಪರ ಅೀಕ್ಷಕ ಸಿ.ಮಲ್ಲಿಕ್ ಕರೆ ಅಪರಾಧ ತಡೆ ಮಾಸಾಚರಣೆ

ತಿ.ನರಸೀಪುರ: ಪ್ರಜ್ಞಾವಂತ ನಾಗರಿಕರು ಹೆಚ್ಚು ಜಾಗ್ರತೆ ವಹಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪರಾಧಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಎಎಸ್ಪಿ ಸಿ.ಮಲ್ಲಿಕ್ ಕರೆ ನೀಡಿದರು.
ಪಟ್ಟಣದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆ-2025 ಹಾಗೂ ಹೆಲ್ಮೆಟ್ ಕಡ್ಡಾಯಕ್ಕೆ ಬೈಕ್‌ಗಳ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇದರಲ್ಲಿ ಸಾರ್ವಜನಿಕ ಸಹಕಾರ ಅತ್ಯಂತ ಬಹಳ ಮುಖ್ಯ ಎಂದರು.
ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಜಿ.ಎಸ್.ರಘು ಮಾತನಾಡಿ, ಅಂತರ್ಜಾಲ ಮತ್ತು ಮೊಬೈಲ್ ಬಳಕೆ ಮಾರಕ ವ್ಯಸನವಾಗಿ ಪರಿಣಮಿಸುತ್ತಿದೆ. ಇದರಿಂದ ಯುವಜನತೆ ಮತ್ತು ಮಕ್ಕಳಲ್ಲಿ ಮಾನಸಿಕ ಖಿನ್ನತೆ, ದೈಹಿಕ ಅಸ್ವಸ್ಥತೆ ಉಂಟಾಗುತ್ತದೆ. ಹಾಗಾಗಿ ಇವುಗಳ ಬಳಕೆಯನ್ನು ಮಿತಗೊಳಿಸಬೇಕು. ನಿಗದಿತ ಕಾಲಮಿತಿ ಇಟ್ಟುಕೊಂಡು ಇವುಗಳಲ್ಲಿರುವ ಲಾಭದಾಯಕ ಅಂಶಗಳನ್ನು ಮಾತ್ರ ಬಳಸಿಕೊಳ್ಳಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅತಿ ವೇಗದ ಚಾಲನೆ, ಮದ್ಯಪಾನಯುಕ್ತ ಚಾಲನೆ ಮತ್ತು ಮೊಬೈಲ್ ಬಳಕೆ ಮಾಡಿಕೊಂಡು ವಾಹನ ಚಲಾಯಿಸುವುದು ಅಪರಾಧ. ಹಾಗಾಗಿ ಎಲ್ಲರು ಕಾನೂನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಮಾತನಾಡಿ, ನಮ್ಮ ಠಾಣಾ ವ್ಯಾಪ್ತಿಯ ಎಲ್ಲ ಮನೆಗಳಿಗೆ ಅಪಘಾತ ಮತ್ತು ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜೀವನ ನಿರ್ವಹಣೆಗೆ ಆಟೋ ಚಾಲನೆ ಅವಲಂಬಿಸಿರುವ ಚಾಲಕರು ವಾಹನ ವಿಮೆ, ಚಾಲನಾ ಪರವಾನಗಿಯನ್ನು ಕಾಲ ಕಾಲಕ್ಕೆ ನವೀಕರಿಸಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ನಂಬಿದ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ಬಂದು ಬಿಡುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಹಳೇ ಸಂತೇಮಾಳದಿಂದ ಪೊಲೀಸರು, ರೈತ ನಾಯಕರು, ಸಂಘ ಸಂಸ್ಥೆಗಳ ಮುಖಂಡರು ಮತ್ತು ಪತ್ರಕರ್ತರು ಹೆಲ್ಮೆಟ್ ಧರಿಸಿದ ಬೈಕ್ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನಾಥ ಶವಗಳ ಮೋಕ್ಷದಾತ ಎಂ.ಮಾದೇಶ್ ಅವರನ್ನು ಸನ್ಮಾನಿಸಲಾಯಿತು. ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ, ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾಸ ವಿತರಿಸಲಾಯಿತು.
ಪಿಎಸ್‌ಐ ಜಗದೀಶ್ ಧೂಳಶೆಟ್ಟಿ, ವಿದ್ಯೋದಯ ಶಿಕ್ಷಣ ಸಂಸ್ಥೆಯ ಆಡಳಿತಾಕಾರಿ ಕೆ.ಪಿ.ಉದಯ್‌ಕುಮಾರ್, ಪ್ರಾಂಶುಪಾಲ ಡಾ.ಟಿ.ಎಸ್.ಬಸವಣ್ಣಸ್ವಾಮಿ, ಎನ್.ಕಲ್ಪನಾ, ಮುಖಂಡರಾದ ಡಾ.ಮನ್ಸೂರ್ ಆಲಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ತಾಲೂಕು ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ತೊಂಟೇಶ್, ಶಂಕರ್ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net