ಅಗ್ನಿಶಾಮಕ ಠಾಣೆಗೆ ಹೊಸ ಕಟ್ಟಡ ನಿರ್ಮಾಣ: ಗಮನ ಸೆಳೆದ ಶಾಸಕ ಕೆ.ಹರೀಶ್ ಗೌಡರ ಪ್ರಶ್ನೆ

ಶಾಸಕ ಕೆ.ಹರೀಶ್ ಗೌಡ
ಶಾಸಕ ಕೆ.ಹರೀಶ್ ಗೌಡ
Published on
ಮೈಸೂರು: ಮೈಸೂರಿನ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಕಟ್ಟಡವನ್ನು ಕೆಡವಿ, ಹಾಲಿ ಇರುವ ವಾಸ್ತು ಶೈಲಿಯನ್ನು ಹೋಲುವಂತೆ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಆವರಣದಲ್ಲಿರುವ ಕಟ್ಟಡಗಳು ಕುಸಿದು ಹಾಗೂ ಶಿಥಿಲಾವಸ್ಥೆಯಲ್ಲಿರುವುದರಿಂದ ಈ ಠಾಣೆಯ ಅಗ್ನಿಶಾಮಕ ಕಟ್ಟಡವನ್ನು ಕೆಡವಿ ಹೊಸದಾಗಿ ಮರು ನಿರ್ಮಾಣ ಹಾಗೂ ಆವರಣದಲ್ಲಿ ಅಧಿಕಾರಿ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂದು ಶಾಸಕರು ಪ್ರಶ್ನಿಸಿದರು.
ಸದರಿ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಮೈಸೂರು ನಗರದ ಹೃದಯ ಭಾಗದಲ್ಲಿರುವ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯು ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಕಟ್ಟಡವು 1898ರಲ್ಲಿ ನಿರ್ಮಾಣಗೊಂಡು ಸುಮಾರು 126 ವರ್ಷಗಳ ಹಳೆಯದಾದ ರಾಜರ ಕಾಲದ ಪಾರಂಪರಿಕ ಕಟ್ಟಡವಾಗಿರುತ್ತದೆ. ಸದರಿ ಕಟ್ಟಡದಲ್ಲಿ 1942ನೇ ಇಸವಿಯಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭವಾಗಿ ಅಂದಿನಿಂದಲೂ ಕಾರ್ಯ ನಿರ್ವಹಿಸುತ್ತಿದ್ದು, ಈ ಕಟ್ಟಡದಲ್ಲಿ ಮುಖ್ಯ ಅಗ್ನಿಶಾಮಕ ಅಧಿಕಾರಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಅಗ್ನಿಶಾಮಕ ಠಾಣಾಧಿಕಾರಿಗಳ ಕಚೇರಿಗಳು, ಇತರೆ 64 ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ಅಗ್ನಿಶಾಮಕ ಠಾಣೆ ಇದ್ದು, ದಿನದ 24 ಗಂಟೆಯು ಕರ್ತವ್ಯ ನಿರ್ವಹಿಸುತ್ತಾ ಸಾರ್ವಜನಿಕರ ಸೇವೆಗೆ ಸದಾ ಸನ್ನದ್ಧರಾಗಿರುತ್ತಾರೆ ಎಂದರು.
2019ರ ನವೆಂಬರ್ 30 ರಂದು ಮಳೆಯಿಂದಾಗಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸ್ವಾಗತ ಕಮಾನು ಕುಸಿದು ಬಿದ್ದಿರುವುದರಿಂದ, ಸದರಿ ಕಟ್ಟಡವು ಸಹ ಶಿಥಿಲಾವಸ್ಥೆಯಲ್ಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಪಾರಂಪರಿಕ ಸಮಿತಿಯ ನಡವಳಿಯಂತೆ, ಸದಸ್ಯ ಕಾರ್ಯದರ್ಶಿಗಳು, ಅರ್ಜಿದಾರರಿಂದ ಹಾಲಿ ಇರುವ ಕಟ್ಟಡದ ವಾಸ್ತು ಶೈಲಿಯನ್ನೇ ಹೋಲುವಂತಹ ನಿರ್ಮಾಣದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅಗತ್ಯ ನಕ್ಷೆಗಳು, 3ಡಿ ನಕ್ಷೆಗಳೊಂದಿಗೆ ಹಾಲಿ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಪಡೆದು ಮೈಸೂರು ಮಹಾನಗರ ಪಾಲಿಕೆ ಮುಖಾಂತರವಾಗಿ ಶೀಘ್ರವಾಗಿ ಪಡೆದು ಹಾಲಿ ಕಟ್ಟಡವನ್ನು ಕೆಡವಿ ಹೊಸ ಅಗ್ನಿಶಾಮಕ ಠಾಣೆ ಮತ್ತು ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ನಿರ್ಣಯಿಸಲಾಗಿರುತ್ತದೆ ಎಂದು ಹೇಳಿದರು.
ಅಗ್ನಿಶಾಮಕ ಠಾಣೆಯನ್ನು ಕೆಡವಿ ಹೊಸದಾಗಿ ಅಗ್ನಿಶಾಮಕ ಠಾಣೆ ಹಾಗೂ ಆವರಣದಲ್ಲಿ ವಸತಿ ಗ್ರಹ ನಿರ್ಮಾಣ ಮಾಡಲು ರೂ. 30 ಕೋಟಿ ರೂ. ಅನುದಾನ ಮಂಜೂರು ಮಾಡುವ ಬಗ್ಗೆ ಸರ್ಕಾರದ ನಿಲುವೇನು? ಎಂಬ ಹರೀಶ್‌ಗೌಡರ ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿ, ಈ ಸಂಬಂಧ ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿತ್ತು. ಆರ್ಥಿಕ ಇಲಾಖೆಯು ಸದರಿ ಪ್ರಸ್ತಾವನೆಯು ಹೊಸ ಯೋಜನೆಯಾಗಿದ್ದು, 2025-26 ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಿರುವುದಿಲ್ಲ. ಪ್ರಸ್ತುತ ಆರ್ಥಿಕ ವಿಸ್ತರಣೆ ಇಲ್ಲದ ಹಿನ್ನಲೆಯಲ್ಲಿ ಹೆಚ್ಚುವರಿ ಅನುದಾನ ಅವಕಾಶವಾಗುವುದಿಲ್ಲವಾದ್ದರಿಂದ ಒದಗಿಸಲು ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net