ಮತದಾರರ ಹಕ್ಕು ಕಸಿಯಲು ಪಿತೂರಿ

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್
Published on

ಪಿರಿಯಾಪಟ್ಟಣ:

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ಹೆಸರಿನಲ್ಲಿ ರಾಜ್ಯದಲ್ಲಿ ಮತದಾರರ ಹಕ್ಕು ಕಸಿಯಲು ಬಿಜೆಪಿ ಹಾಗೂ ಜೆಡಿಎಸ್ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಜಿಲ್ಲೆಯ ಒಟ್ಟು 27.99 ಲಕ್ಷ ಮತದಾರರ ಪೈಕಿ 5.65 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ವಿವಿಧ ಕಾರಣಗಳಿಂದ ತೆಗೆಯಲಾಗಿದೆ. ಇವರಲ್ಲಿ 2.41 ಲಕ್ಷ ಜನ ಶಾಶ್ವತ ಸ್ಥಳಾಂತರಗೊಂಡವರು. 1.44 ಲಕ್ಷ ಜನ ಪತ್ತೆಯಾಗದವರು, 1.12 ಲಕ್ಷ ಜನರು ಮೃತರು ಎಂದು ದಾಖಲಿಸಿರುವುದು ಅಸಹಜವಾದ ಅಂಕಿ ಅಂಶವಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕೆಲಸ ಇದೂವರೆಗೂ ಸಮರ್ಪಕವಾಗಿ ನಡೆಯದೆ ಸಾವಿರಾರು ಮತದಾರರು ಹೆಸರು ಪಟ್ಟಿಯಿಂದ ಬಿಟ್ಟುಹೋಗಿರುವುದಲ್ಲದೆ, ಪರಿಷ್ಕರಣೆ ವೇಳೆ ಗೈರು, ಸ್ಥಳಾಂತರ, ಮೃತರು ಎಂದು ಗುರುತಿಸಿ ಶಾಶ್ವತವಾಗಿ ಮತ ಪಟ್ಟಿಯಿಂದಲೇ ಹೆಸರು ತೆಗೆದುಹಾಕಿ ಮತದಾರರ ಹಕ್ಕನ್ನು ಕಸಿಯಲು ಹುನ್ನಾರ ನಡೆದಿದೆ. ರಾಜ್ಯದ ಒಟ್ಟು 5.56 ಕೋಟಿ ಮತದಾರರ ಪೈಕಿ ಪರಿಷ್ಕರಣೆಯಲ್ಲಿ 1.10 ಕೋಟಿ ಮತದಾರರನ್ನು ಕೈ ಬಿಟ್ಟಿದ್ದಾರೆ ಎಂದು ದೂರಿದರು.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಪ್ರತಿಯೊಬ್ಬ ಮತದಾರನಿಗೂ ಸಮರ್ಪಕ ನೋಟಿಸ್ ನೀಡಿ, ಪರಿಶೀಲನೆ ನಡೆಸಿದ ಬಳಿಕವೇ ಹೆಸರುಗಳನ್ನು ಕೈಬಿಡಬೇಕು.ಆದರೆ ಹಲವೆಡೆ ಮತದಾರರಿಗೆ ಮಾಹಿತಿ ನೀಡದೆ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಜನಬೆಂಬಲ ಕಳೆದುಕೊಳ್ಳುತ್ತಿರುವ ಬಿಜೆಪಿ, ಆಡಳಿತ ಯಂತ್ರವನ್ನು ಬಳಸಿಕೊಂಡು ಮತದಾರರ ಪಟ್ಟಿಯಲ್ಲೇ ಹಸ್ತಕ್ಷೇಪ ಮಾಡುವ ಮೂಲಕ ಮತ ಚೋರಿ ಮಾಡಲು ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕ್ರಮ ಎಂದು ವಾಗ್ದಾಳಿ ನಡೆಸಿದರು.
ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿದರು. ಟೌನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಕುಮಾರ್‌ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ರಘು, ಮುಖಂಡ ರಾಜೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net