ಮೈಸೂರು: ಕುವೆಂಪು ರಚಿತ ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಎಂಬ ಪದ ಸೇರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಲಿದ್ದು, ಆ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿಯ ಬಳಿ ನಿರ್ಮಾಣವಾಗಿರುವ ಡಿ.ದೇವರಾಜ ಅರಸು ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.
ನವೆಂಬರ್‌ನಲ್ಲಿ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಯಾವಾಗ ಏನು ಆಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರಿದ್ದಾರೆ. ಇನ್ನೂ ಸಚಿವರಾಗಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅದು ತಪ್ಪಲ್ಲ, ಅದು ಸಹಜ. ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್‌ಯೊಂದಿಗೆ ಗಲಾಟೆ ನಡೆದಿದೆ ಎಂಬುದು ಸರಿಯಲ್ಲ. ಸಭೆ ಸೇರುವುದೇ ಚರ್ಚೆ ಮಾಡಲು, ಅಲ್ಲಿ ಚರ್ಚೆ ಆಗಿದೆಯಷ್ಟೇ, ಅಲ್ಲಿ ಜಗಳವಾಗಿಲ್ಲ. ಚರ್ಚೆಯ ನಂತರ ಎಲ್ಲವೂ ಪರಿಹಾರವಾಗಿದೆ ಎಂದು ಸ್ಪಷ್ಟಪಡಿಸಿದರು.