ಶೋಷಿತ ಸಮಾಜಕ್ಕೆ ಕಾಂಗ್ರೆಸ್ ವಂಚನೆ:ಮಾಜಿ ಸಚಿವ ಶ್ರೀರಾಮುಲು ಟೀಕೆ
ಬಿಜೆಪಿ ಎಸ್‌ಟಿ ಮೋರ್ಚಾದಿಂದ ನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ರಾಜುಗೌಡನಾಯಕ, ಬಂಗಾರು ಹನುಮಂತು, ಪಕೀರಪ್ಪ, ರಾಮಚಂದ್ರಪ್ಪ, ಹೇಮಲತಾ ನಾಯಕ, ಶಿವಕುಮಾರ್, ಅಪ್ಪಣ್ಣ, ಸಿದ್ದರಾಜು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಜೆಪಿ ಅವಧಿಯಲ್ಲಿ ಏರಿಕೆ ಮಾಡಿದ್ದ ಶೇ.7ರ ಮೀಸಲಾತಿಯನ್ನು ಮತ್ತೆ ಶೇ.3ಕ್ಕೆ ಇಳಿಸಿ ಕಾಂಗ್ರೆಸ್ ಅನ್ಯಾಯ ಮಾಡಿದೆ
ನ್ಯಾಯಾಲಯದಲ್ಲಿ ಮೂರು ಬಾರಿ ಪ್ರಕರಣ ವಿಚಾರಣೆಗೆ ಬಂದರೂ ಸರ್ಕಾರದ ಪರವಾಗಿ ವಕೀಲರು ಹಾಜರಾಗದೆ ತಡೆಯಾಜ್ಞೆ ತೆರವುಗೊಂಡಿಲ್ಲ
ಮೈಸೂರು:ದೀನ ದಲಿತರ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್, ಶೋಷಿತರಿಗೆ ವಂಚನೆ ಮಾಡುತ್ತಲೇ ಬರುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದರು.
ಬಿಜೆಪಿ ಎಸ್‌ಟಿ ಮೋರ್ಚಾದಿಂದ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಿತ್ಯೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಬದ್ಧವಾಗಿ ಪರಿಶಿಷ್ಟ ಜನಾಂಗಕ್ಕೆ ಶೇ.7 ಮೀಸಲಾತಿ ನೀಡಬೇಕು. ಆದರೆ, ನ್ಯಾಯಾಲಯದಲ್ಲಿ ಪ್ರಕರಣವಿದೆ ಎನ್ನುವ ನೆಪದಲ್ಲಿ ಶೇ.3ಕ್ಕೆ ಇಳಿಸುವ ಮೂಲಕ ಎಸ್‌ಟಿ ಪ್ರವರ್ಗದವರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ್ ನೇತೃತ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರ ಬಳಿ ನಿಯೋಗ ಹೋಗಿ ಮೈಸೂರು ಭಾಗದಲ್ಲಿದ್ದ ತಳವಾರ, ಪರಿವಾರದವರನ್ನು ಎಸ್‌ಟಿಗೆ ಸೇರಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಗಮೋಹನ್ ದಾಸ್ ನೀಡಿದ್ದ ವರದಿಯಂತೆ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಏರಿಕೆ ಮಾಡಲಾಯಿತು. 30 ವರ್ಷದ ಹೋರಾಟಕ್ಕೆ ಮೀಸಲಾತಿ ಏರಿಕೆ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದರು.
ತಡೆಯಾಜ್ಞೆ ತೆರವುಗೊಂಡಿಲ್ಲ
ಯಾರೋ ನ್ಯಾಯಾಲಯದ ಮೊರೆ ಹೋಗಿದ್ದರಿಂದ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಈ ಕಾರಣಕ್ಕೆ ಬಿಜೆಪಿ ಅವಧಿಯಲ್ಲಿ ಏರಿಕೆ ಮಾಡಿದ್ದ ಶೇ.7ರ ಮೀಸಲಾತಿಯನ್ನು ಮತ್ತೆ ಶೇ.3ಕ್ಕೆ ಇಳಿಸಿ ಅನ್ಯಾಯ ಮಾಡಿದೆ. ನ್ಯಾಯಾಲಯದಲ್ಲಿ ಮೂರು ಬಾರಿ ಪ್ರಕರಣ ವಿಚಾರಣೆಗೆ ಬಂದರೂ ಸರ್ಕಾರದ ಪರವಾಗಿ ವಕೀಲರು ಹಾಜರಾಗದೆ ತಡೆಯಾಜ್ಞೆ ತೆರವುಗೊಂಡಿಲ್ಲ ಎಂದು ಶ್ರೀರಾಮುಲು ದೂರಿದರು.
ಸ್ವಾತಂತ್ರೃ ಬಂದಾಗಿನಿಂದಲೂ ನಾವು ದಲಿತ, ಶೋಷಿತರ ಪರ ಎಂದು ಹೇಳಿಕೊಂಡೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಸಂವಿಧಾನ ಬದ್ಧವಾಗಿ ಎಸ್ಸಿ, ಎಸ್ಟಿಗಳಿಗೆ ಸಿಗಬೇಕಾದ ಮೀಸಲಾತಿ, ಸೌಲಭ್ಯವನ್ನು ನೀಡಿಲ್ಲ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ಸೋಲಿಸಿದ ಕಾಂಗ್ರೆಸ್, ಜನರ ಆಕ್ರೋಶ, ಟೀಕೆ ಎದುರಿಸಿತು. ಹೀಗಾಗಿ ರಾಜ್ಯಸಭೆಗೆ ಕಳುಹಿಸುವ ಮೂಲಕ ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿತು. ಇತಿಹಾಸದ ಉದ್ದಕ್ಕೂ ವಂಚನೆ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ ಎಂದು ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಈ ವಂಚನೆಗಳ ಕುರಿತು ನಮ್ಮ ಸಮುದಾಯದ ಮುಖಂಡರು, ಮನೆ, ಮನೆಗೆ ಹೋಗಿ ಮನವರಿಗೆ ಮಾಡಿಕೊಡಬೇಕು. ಎಸ್ಟಿ ಪ್ರವರ್ಗಕ್ಕೆ ಶೇ.7 ಮೀಸಲಾತಿ ನೀಡುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಪಕ್ಷಾತೀತವಾಗಿ ಹೋರಾಟ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಎಸ್ಟಿ ಪ್ರವರ್ಗಕ್ಕೆ ಅಗಿರುವ ಅನ್ಯಾಯವನ್ನು ಸರಿ ಪಡಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ. ಸರ್ಕಾರ ಯಾವುದೇ ಪಕ್ಷದವರಿದ್ದರೂ ಜನಾಂಗಕ್ಕೆ ಅನ್ಯಾಯವಾಗ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಕೋರಿದರು. ಮೀಸಲಾತಿ ನೀಡುವ ವಿಷಯವಾಗಿ ಕೇಂದ್ರ ಸರ್ಕಾರ ಷೆಡ್ಯೂಲ್‌ನಲ್ಲಿ ಸೇರಿಸಬೇಕು ಎಂದು ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ತಮಿಳುನಾಡು ಸರ್ಕಾರದ ಪ್ರಕರಣದಲ್ಲಿ ಮೀಸಲಾತಿ ವಿಷಯದಲ್ಲಿ ಷೆಡ್ಯೂಲ್ ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದರು.
ಕಾಂಗ್ರೆಸ್‌ನಲ್ಲಿ 15 ಜನ ಎಸ್ಟಿ ಪ್ರವರ್ಗದಿಂದ ಚುನಾಯಿತರಾದ ಶಾಸಕರಿದ್ದಾರೆ. ಎಲ್ಲರೂ ಒಟ್ಟಾಗಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಹೋರಾಟ ಮಾಡಬೇಕು. ನಾನೇ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿ ಪ್ರಧಾನಿ, ಇನ್ನಿತರೆ ನಾಯಕರನ್ನು ಭೇಟಿ ಮಾಡಿಸುತ್ತೇನೆ. ಒಟ್ಟಾಗಿ ಬರಬೇಕು ಎಂದು ರಮೇಶ್ ಜಾರಕಿಹೊಳಿ ಬಹಿರಂಗ ಆಹ್ವಾನ ನೀಡಿದರು.
ಧ್ವನಿ ಎತ್ತುತ್ತಿಲ್ಲ :
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಎಸ್ಟಿ ಪ್ರವರ್ಗಕ್ಕೆ ಕಾಂಗ್ರೆಸ್ ಮಾಡಿರುವ ದ್ರೋಹದ ಕುರಿತು ಕಾಂಗ್ರೆಸ್ ಶಾಸಕರು ಧ್ವನಿ ಎತ್ತುತ್ತಿಲ್ಲ. 187 ಕೋಟಿ ರೂ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಾಗಲೂ ತುಟಿ ಬಿಚ್ಚಲಿಲ್ಲ ಎಂದು ಟೀಕಿಸಿದರು.
ರಾಜ್ಯಸಭೆ, ವಿಧಾನಸಭೆಗೆ ನಾಮ ನಿರ್ದೇಶನವಾಗುವ ಸಮಯದಲ್ಲಿ ಉಗ್ರಪ್ಪ ಪ್ರಚಾರಕ್ಕಾಗಿ ಮೀಸಲಾತಿ ಪರ ಮಾತನಾಡಿದರೂ ಬಳಿಕ ಸುಮ್ಮನಾದರು. ಕಾಂಗ್ರೆಸ್‌ಗೆ ಎಸ್ಟಿ ಮತ ಮಾತ್ರ ಬೇಕು. ಅಭಿವೃದ್ಧಿ ಬೇಕಾಗಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮೂಲೆ ಗುಂಪು :
ಮಾಜಿ ಸಂಸದ ಬಿ.ಬಿ. ನಾಯಕ ಮಾತನಾಡಿ, ಡಿ.ದೇವರಾಜ ಅರಸು ಅವರಿಗೆ ಅಪಮಾನ ಮಾಡಿದ್ದ ಕಾಂಗ್ರೆಸ್, ಈಗ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡಿದೆ. ಕೇವಲ ಅಧಿಕಾರಕ್ಕಾಗಿ ದೀನ, ದಲಿತರು, ಶೋಷಿತರ ಹೆಸರು ಹೇಳಿಕೊಳ್ಳುತ್ತಿದೆ ಎಂದು ದೂರಿದರು.
ಎಸ್‌ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ನೀಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ. ಅವರ ಅವಧಿಯಲ್ಲಿ ಎಲ್ಲ ಪ್ರವರ್ಗದವರಿಗೆ ಶೇ.75 ಮೀಸಲಾತಿ ನೀಡಿದ್ದರು. ಆದರೆ ಚುನಾಯಿತ ಸರ್ಕಾರಗಳಿಗೆ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಜುಗೌಡ ನಾಯಕ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ತಿಪ್ಪರಾಜ ಹಲಾಲ್ದಾರ್, ಮಾಜಿ ಸಂಸದ ಬಿ.ವಿ.ನಾಯಕ, ಫಕೀರಪ್ಪ, ಮಾಜಿ ಶಾಸಕ ರಾಮಚಂದ್ರಪ್ಪ, ಮುಖಂಡರಾದ ಅಪ್ಪಣ್ಣ, ನಾಗೇಂದ್ರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿದ್ದರಾಜು, ನವೀನ್‌ಕುಮಾರ್, ರಾಮಕೃಷ್ಣ ಇತರರು ಇದ್ದರು.