ಉದ್ಯಮಿಯಾಗಲು ಬಯಸುವವರಿಗೆ ಆತ್ಮವಿಶ್ವಾಸ ಮುಖ್ಯ

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಹಣ ಕಾರ್ಯಕ್ರಮವನ್ನು ಶಾಸಕ ಕೆ.ಹರೀಶ್‌ಗೌಡ ಉದ್ಘಾಟಿಸಿದರು. ಎಂ.ಕೆ.ಸವಿತಾ, ಪ್ರೊ.ಮೊರಬದ ಮಲ್ಲಿಕಾರ್ಜುನ, ಬಿ.ವಿ.ವಿಶ್ವಾಸ್,  ಡಾ.ರೇಚಣ್ಣ, ಡಾ.ವಿ.ಗಂಗಧಾರಸ್ವಾಮಿ  ಇದ್ದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಹಣ ಕಾರ್ಯಕ್ರಮವನ್ನು ಶಾಸಕ ಕೆ.ಹರೀಶ್‌ಗೌಡ ಉದ್ಘಾಟಿಸಿದರು. ಎಂ.ಕೆ.ಸವಿತಾ, ಪ್ರೊ.ಮೊರಬದ ಮಲ್ಲಿಕಾರ್ಜುನ, ಬಿ.ವಿ.ವಿಶ್ವಾಸ್, ಡಾ.ರೇಚಣ್ಣ, ಡಾ.ವಿ.ಗಂಗಧಾರಸ್ವಾಮಿ ಇದ್ದರು.
Published on
ಮೈಸೂರು: ಉದ್ಯಮಿಯಾಗಲು ಬಯಸುವವರಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ನಮಗೆ ನಮ್ಮ ಮೇಲೆ ವಿಶ್ವಾಸವಿಲ್ಲದೆ ಹೋದರೆ ಜೀವನದಲ್ಲಿ ಯಾವುದನ್ನು ಸಾಧಿಸಲು ಆಗುವುದೇ ಇಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಅಭಿಪ್ರಾಯಪಟ್ಟರು.
ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದಿಂದ ಆಯೋಜಿಸಿರುವ ಆರೋಹಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಬಳಿ ನೂರಾರು ಕೋಟಿ ಹಣವಿರಬಹುದು. ಅಷ್ಟೇ ಪ್ರಮಾಣದ ಆಸ್ತಿ ಇರಬಹುದು. ಆದರೆ ನಮಗೆ ನಾವು ಯಶಸ್ವಿಯಾಗುತ್ತೇವೆ ಎನ್ನುವ ಆತ್ಮವಿಶ್ವಾಸವಿಲ್ಲದೇ ಹೋದರೆ ಬೆಳವಣಿಗೆಯಲ್ಲಿ ಹಿಂದೆ ಬೀಳಬೇಕಾಗುತ್ತದೆ. ಸಾಧನೆಯಲ್ಲಿ ತಳ ಸೇರಬೇಕಾಗುತ್ತದೆ. ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಕಳೆದುಕೊಂಡ ಅನೇಕ ಉದ್ಯಮಿಗಳು ಏನಾದರೂ ಎನ್ನುವ ವಿಚಾರ ಇತ್ತೀಚಿನ ವರ್ಷ ಹಾಗೂ ಕೆಳ ದಿನಗಳ ಹಿಂದೆಯೇ ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಉದ್ಯಮಿಗಳಾಗುವವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅಂತಿಮ ಕ್ಷಣದವರೆಗೂ ಆಶಯ, ಭರವಸೆಯನ್ನು ಹೊಂದಿರಬೇಕು. ಆಗ ಮಾತ್ರ ಯಾವುದಾದರೂ ಕಡೆಯಿಂದ ಸಣ್ಣದೊಂದು ಬೆಳಕು ಕಾಣಿಸಿಕೊಂಡು ಮಾರ್ಗದರ್ಶನ ಮಾಡುತ್ತದೆ ಎಂದರು.
ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಪ್ರಾದೇಶಿಕತೆಯ ಭೌಗೋಳಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರದ ಅರಿವು ಬಹಳ ಅವಶ್ಯವಾಗಿರುತ್ತದೆ. ಯಾವುದಾದರೊಂದು ಉದ್ಯಮವನ್ನು ಸ್ಥಾಪನೆ ಮಾಡಲು ಹೊರಡುವ ನವೋದ್ಯಮಿಗಳಿಗೆ, ಯುವ ಸಮೂಹಕ್ಕೆ, ತಾವು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ಆಳ, ಅರಿವನ್ನು ಪ್ರಾಥಮಿಕವಾಗಿ ತಿಳಿದುಕೊಂಡಿರಲೇ ಬೇಕು. ಉದ್ಯಮದ ಹಿತಾಸಕ್ತಿಗಳು ಪ್ರದೇಶದಿಂದ ಪ್ರದೇಶಕ್ಕೆ ಬೇರೆಯಾಗಿರುತ್ತದೆ. ಮಂಡ್ಯದಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ಉದ್ಯಮಿಗಳು ಕಬ್ಬಿನ ಉತ್ಪಾದನೆಗಳನ್ನು ತಯಾರು ಮಾಡುವ ಉದ್ಯಮಗಳನ್ನು ಸ್ಥಾಪನೆ ಮಾಡಬೇಕೇ ಹೊರತು ಅಲ್ಲಿ ಕಬ್ಬಿಣ ಕಾರ್ಖಾನೆ, ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಿದರೆ ಯಶಸ್ಸು ಕಾಣುವುದಿಲ್ಲ. ಇದರೊಂದಿಗೆ ಸ್ಥಳೀಯ ಹವಾಮಾನ, ಮಣ್ಣಿನ ಮಾದರಿ, ಪ್ರಕೃತಿಯ ರಚನೆಗಳು ಕೂಡ ಉದ್ಯಮಕ್ಕೆ ಪೂರಕವಾಗಿ ಇರಬೇಕಾಗುತ್ತದೆ. ಇವುಗಳನ್ನು ಅವಶ್ಯಕವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಮಾನದಲ್ಲಿ ವಾಣಿಜ್ಯ ಚಟುವಟಿಕೆಗಳು ಬಹಳ ಪ್ರಗತಿಯನ್ನು ಕಂಡಿವೆ. ಹಳ್ಳಿಗಳಲ್ಲಿ ಈ ಹಿಂದೆ ಒಂದೋ ಎರಡೋ ಸಣ್ಣ-ಪುಟ್ಟ ಅಂಗಡಿಗಳು ಇರುತ್ತಿದ್ದವು. ಆದರೆ ಈಗ ಬೀದಿಗೊಂದು ಅಂಗಡಿಗಳು ತಲೆ ಎತ್ತಿವೆ. ಅಲ್ಲಿ ಎಲ್ಲ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಅಂದರೆ ಹಳ್ಳಿಗಳೂ ವಾಣಿಜ್ಯ ವಹಿವಾಟಿಗೆ ತಮ್ಮನ್ನು ತೆರೆದುಕೊಂಡಿವೆ. ಈ ನಿಟ್ಟಿನಲ್ಲಿ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿದ್ಯಾರ್ಥಿಗಳು ಅಧ್ಯಯನ ಕೈಗೊಂಡು, ಉದ್ಯಮ ಕ್ಷೇತ್ರದಲ್ಲಿ ಅವಕಾಶಗಳನ್ನು ವಿಪುಲವಾಗಿ ಸೃಷ್ಟಿಸಿಕೊಂಡು ಜೀವನದಲ್ಲಿ ಮೇಲೆ ಬರಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಉದ್ಯೋಗ ದೊರೆಯುತ್ತದೆ ಎಂದುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬಾರದು. ಬದಲಿಗೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಶಿಕ್ಷಣ ಅತಿ ಅಗತ್ಯ ಎನ್ನುವ ಅಂಶವನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಎಸ್‌ಬಿಐನ ಎಜಿಎಂ ಬಿ.ವಿ.ವಿಶ್ವಾಸ್, ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಗಂಗಧಾರಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net