ಗ್ರಾಮ ಮಟ್ಟದಲ್ಲಿ ಇ-ಪೌತಿ ಖಾತೆ ಆಂದೋಲನ ನಡೆಸಿ : ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

 ಇ-ಪೌತಿ ಆಂದೋಲನದ ಅದಾಲತ್ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧ್ಯಕ್ಷತೆಯಲ್ಲಿ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳ ಸಭೆ ಆಯೋಜಿಸಲಾಗಿತ್ತು.
ಇ-ಪೌತಿ ಆಂದೋಲನದ ಅದಾಲತ್ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧ್ಯಕ್ಷತೆಯಲ್ಲಿ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಇ-ಪೌತಿ ಖಾತೆ ಆಂದೋಲನವನ್ನು ಇನ್ನು ಮುಂದೆ ಕಡ್ಡಾಯವಾಗಿ ನಡೆಸಬೇಕು
  • ಗ್ರಾಮ ಮಟ್ಟದಲ್ಲಿ ಅದಾಲತ್ ನಡೆಸುವಂತೆ ನಿರ್ದೇಶನ
ಮೈಸೂರು: ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಕಡ್ಡಾಯವಾಗಿ ಇ-ಪೌತಿ ಖಾತೆ ಆಂದೋಲನದ ಅದಾಲತ್ ನಡೆಸಿ ಪ್ರತಿದಿನವೂ ಪ್ರಗತಿ ಸಾಧಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಎಲ್ಲ ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಕಟ್ಟುನಿಟ್ಟಾಗಿ ಉಸ್ತುವಾರಿ ವಹಿಸಿ ಗಮನಹರಿಸಬೇಕು. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಹಾಗೂ ರೈತರಿಗೆ ಅನುಕೂಲವಾದ ಇ-ಪೌತಿ ಖಾತೆ ಆಂದೋಲನವನ್ನು ಇನ್ನು ಮುಂದೆ ಕಡ್ಡಾಯವಾಗಿ ನಡೆಸಬೇಕು ಎಂದರು.
ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅರ್ಜಿಗಳನ್ನು ಪಡೆದು ರೈತರ ಮನವೊಲಿಸಿ ಪೌತಿ ಖಾತೆಯನ್ನು ನಿಯಮಾನುಸಾರ ಮಾಡಿಕೊಡುವಂತೆ ಹೇಳಿದರು.
ಈ ತಿಂಗಳು, ಪ್ರತಿ ದಿನವೂ ಗ್ರಾಮಮಟ್ಟದಲ್ಲಿ ನಿಯಮಿತವಾಗಿ ಅದಾಲತ್‌ಗಳನ್ನು ನಡೆಸಿ ಕಡ್ಡಾಯವಾಗಿ ಪ್ರತಿ ಗ್ರಾಮ ಆಡಳಿತಾಧಿಕಾರಿಗಳು ಕನಿಷ್ಠ ನೂರು ಇ-ಪೌತಿ ಖಾತೆ ಮಾಡಿ ಕೊಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.
ಮರಣ ಹೊಂದಿರುವ ರೈತರ ಹೆಸರಿನಲ್ಲಿಯೇ ಇರುವ ಪಹಣಿಗಳಲ್ಲಿ ಪೌತಿ ಖಾತೆಯನ್ನು ನಿರ್ವಹಿಸಿ ಅವರ ಕುಟುಂಬದವರ ಹೆಸರಿನಲ್ಲಿ ಜಂಟಿ ಖಾತೆ ಮಾಡಿಸುವ ಮೂಲಕ ಜೀವಂತವಿರುವ ಉತ್ತರಾಧಿಕಾರಿಗಳ ಹೆಸರನ್ನು ಪಹಣಿಗಳಲ್ಲಿ ನಮೂದಿಸಿ ಕಾಲೋಚಿತಗೊಳಿಸುವ ಈ ಯೋಜನೆಯು ರೈತರಿಗೆ ಅನುಕೂಲಕರವಾದ ಯೋಜನೆಯಾಗಿರುತ್ತದೆ ಎಂದರು.
 ಈ ಹಿಂದೆ ಆಧಾರ್ ಸೀಡಿಂಗ್ ಮಾಡುವ ವೇಳೆ ಗ್ರಾಮ ಆಡಳಿತ ಅಧಿಕಾರಿಗಳು ಗುರುತಿಸಿರುವ ಮರಣ ಹೊಂದಿರುವ ಭೂಮಾಲೀಕರ ಪಹಣಿಗಳನ್ನು ಕಾಲೋಚಿತಗೊಳಿಸುವ ಬಗ್ಗೆ ಸದರಿ ಅದಾಲತ್‌ಗಳು ಸಹಕಾರಿಯಾಗುತ್ತವೆ. ಆದ್ದರಿಂದ ಕಡ್ದಾಯವಾಗಿ ಪ್ರತಿದಿನ ರೈತರ ಬಳಿಗೆ ಹೋಗಿ, ಗ್ರಾಮ ಮಟ್ಟದಲ್ಲಿ ಅದಾಲತ್ ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ಡಿಡಿಎಲ್ಆರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net