ಆಸ್ತಿ ಒತ್ತುವರಿ ತೆರವು ಅಭಿಯಾನ ನಡೆಸಿ: ಸಚಿವ ಎಚ್.ಸಿ.ಬಾಲಕೃಷ್ಣ ಸೂಚನೆ

ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಎಚ್.ಸಿ.ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಕೆ.ವೆಂಕಟೇಶ್, ಪಿ.ಎಸ್.ರವೀಂದ್ರ, ಬಿ.ಬಿ.ಕಾವೇರಿ, ಜಿ.ಲಕ್ಷ್ಮೀಕಾಂತರೆಡ್ಡಿ ಇದ್ದರು.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಎಚ್.ಸಿ.ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಕೆ.ವೆಂಕಟೇಶ್, ಪಿ.ಎಸ್.ರವೀಂದ್ರ, ಬಿ.ಬಿ.ಕಾವೇರಿ, ಜಿ.ಲಕ್ಷ್ಮೀಕಾಂತರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೆರವು ಮಾಡಲು ಅಭಿಯಾನ ಕಾರ್ಯ ಹಮ್ಮಿಕೊಳ್ಳುವಾಗ ಒತ್ತುವರಿ ತೆರವಿನಲ್ಲಿ ಯಾವುದೇ ರಾಜಿ ಇಲ್ಲ
  • ನಗರ ಸ್ಥಳೀಯ ಸಂಸ್ಥೆಗಳು ನೀರು, ರಸ್ತೆ, ಒಳಚರಂಡಿ, ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು
ಮೈಸೂರು:ಜನರಿಗೆ ಮೂಲಸೌಲಭ್ಯ ಒದಗಿಸುವ ಜತೆಗೆ ಆಸ್ತಿ ಒತ್ತುವರಿ ತೆರವು ಅಭಿಯಾನ ನಡೆಸಬೇಕು ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳು ಆಸ್ತಿಗಳ ಒತ್ತುವರಿ ತೆರವು ಮಾಡಲು ಅಭಿಯಾನ ಕಾರ್ಯ ಹಮ್ಮಿಕೊಳ್ಳುವಾಗ ಒತ್ತುವರಿ ತೆರವಿನಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಇರುವ ಕೋರ್ಟ್ ಪ್ರಕರಣಗಳ ಕುರಿತು ಪೌರಾಡಳಿತ ಇಲಾಖೆಯ ಕಾನೂನು ವಿಭಾಗ ಸಮರ್ಥವಾಗಿ ವಾದ ಮಂಡಿಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳು ನೀರು, ರಸ್ತೆ, ಒಳಚರಂಡಿ, ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಈ ಸೌಲಭ್ಯಗಳನ್ನು ಕಲ್ಪಿಸಲು ಸಂಪನ್ಮೂಲಗಳ ಕ್ರೋಡೀಕರಣ ಮಾಡಬೇಕು ಎಂದು ನಿರ್ದೇಶನ ನೀಡಿದರು.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಇಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳದೆ ಇದ್ದರೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದರೆ ಮೂರು ಬಾರಿ ನೋಟಿಸ್ ನೀಡಿ ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚನೆ ನೀಡಿದರು.
ಇಂಜಿನಿಯರ್ ಹುದ್ದೆಗಳು ಖಾಲಿ ಇರುವ ಕಡೆಗೆ ಲೋಕೋಪಯೋಗಿ (ಪಿಡಬ್ಲುೃಡಿ )ಇಲಾಖೆಯಿಂದ ಹೆಚ್ಚುವರಿ ಹೊಣೆ ನೀಡಿ ನಿಯೋಜಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ಆಡಳಿತ ನಡೆಸಲು ಸಂಪನ್ಮೂಲ ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪನ್ಮೂಲ ನೀಡುತ್ತವೆ. ಅಲ್ಲದೆ ಸ್ಥಳೀಯವಾಗಿ ಇರುವ ಆಸ್ತಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ನೀಡುವ ಸೌಲಭ್ಯಗಳ ತೆರಿಗೆಗಳನ್ನು ನಿಗದಿತ ಅವಧಿಯಲ್ಲಿ ವಸೂಲಿ ಮಾಡಬೇಕು. ಸ್ವಚ್ಛತೆ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಉತ್ತಮವಾಗಿ ಇರಬೇಕು ಎಂದು ಸೂಚನೆ ನೀಡಿದರು.
ಕಾಟಾಚಾರದ ಬಜೆಟ್ ಬೇಡ:
ಸ್ಥಳೀಯ ಸಂಸ್ಥೆಗಳಲ್ಲಿ ಮಂಡಿಸುವ ಬಜೆಟ್ ಕಾಟಾಚಾರಕ್ಕೆ ಆಗಬಾರದು. ತೆರಿಗೆ ವಸೂಲಿ ವ್ಯವಸ್ಥಿತವಾಗಿ ನಡೆಯಬೇಕು. ತೆರಿಗೆ ವಸೂಲಿಗೆ ಪೂರಕವಾಗಿ ಬಜೆಟ್ ಮಂಡನೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶೇ.30 ಅನುದಾನ ಬರುತ್ತದೆ, ಅದನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡಿಕೊಂಡು ಬಯೋ ಗ್ಯಾಸ್ ಉತ್ಪಾದನೆ ಮಾಡಿಕೊಳ್ಳಲು ಹಲವು ಕಂಪನಿಗಳು ಮುಂದೆ ಬಂದಿವೆ. ಈ ಕಂಪನಿಗಳ ಜತೆ ಸಭೆ ನಡೆಸಿ ಒಪ್ಪಂದ ಮಾಡಿಕೊಳ್ಳಲಾಗುವುದು. ಖಾಸಗಿ ರಸ್ತೆಗಳನ್ನು ಸರ್ಕಾರಿ ರಸ್ತೆಗಳಾಗಿ ಮಾಡುವ ಕಾಯ್ದೆ ಜಾರಿಗೆ ತರಲಾಗಿದೆ. ಯಾವುದೇ ಅನಧಿಕೃತ ಬಡಾವಣೆಗಳು ನಿರ್ಮಾಣ ಆಗಿದ್ದರೆ ಅವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶವ ಸಂಸ್ಕಾರ ಮಾಡಲು ಸುಡುವ ಘಟಕ (ಬರ್ನಿಂಗ್ ಯೂನಿಟ್) ಗಳನ್ನು ಸ್ಥಾಪಿಸಬೇಕು. ಸ್ಥಳೀಯ ಸಂಸ್ಥೆಗಳ ಜಾಗವನ್ನು ಕೆಲವು ಕಡೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವುಗಳ ಬಗ್ಗೆ ಇಲಾಖೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
==========
ಶಾಸಕರಿಂದ ಹಲವು ಬೇಡಿಕೆ
ಸಭೆಯಲ್ಲಿ ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂಜಿನಿಯರ್‌ಗಳ ಕೊರತೆ ಇದೆ. ಮೈಸೂರು ನಗರ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಖಾಸಗಿ ಬಡಾವಣೆಗಳನ್ನು ಯಾವುದೇ ಅಭಿವೃದ್ಧಿ ಮಾಡದೆ ಹಾಗೇಯೇ ನೀಡಿದ್ದಾರೆ. ಖಾಸಗಿ ಬಡಾವಣೆಗಳಿಗೆ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ವಿರಾಜಪೇಟೆ ಶಾಸಕ ಪೊನ್ನಣ್ಣ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಅಮೃತ್ 2 ಯೋಜನೆಯಡಿ ವಿರಾಜಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಇನ್ನೂ ಮುಗಿದಿಲ್ಲ. ಮನೆ ಮನೆಗೆ ನಲ್ಲಿ ಸಂಪರ್ಕ ಮಾಡಿಸಿಲ್ಲ. ಪುರಸಭೆಯ ಕಟ್ಟಡ ನಿರ್ಮಾಣ ಬಾಕಿ ಇದೆ. ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಲಕ್ಷ್ಮಣತೀರ್ಥ ನದಿಗೆ ಹುಣಸೂರು ನಗರದ ಒಳಚರಂಡಿ ನೀರು ಸೇರುತ್ತಿದ್ದು, ನದಿ ಕಲುಷಿತವಾಗುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವರ ಗಮನಕ್ಕೂ ತರಲಾಗಿದೆ. ನೀರು ಸೇರದಂತೆ ತಡೆಯಲು ಕಾಮಗಾರಿಗಾಗಿ 72 ಕೋಟಿ ರೂ.ಅಂದಾಜುಪಟ್ಟಿ ಮಾಡಿ ಕಳುಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಹುಣಸೂರು ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ನೇಮಕ ಮಾಡಬೇಕು. ನಗರಸಭೆ ಆಸ್ತಿಗಳ ಒತ್ತುವರಿ ಆಗಿರುವುದರಿಂದ ಅವು ತೆರವಾಗಬೇಕು. ಇದರಿಂದ ನಗರಸಭೆಗೆ ಆದಾಯ ಬರುತ್ತದೆ ಎಂದು ಮನವಿ ಮಾಡಿದರು.
ಮಡಿಕೇರಿ ಶಾಸಕ ಮಂತರ್‌ಗೌಡ ಮಾತನಾಡಿ, ಅಮೃತ್ 2 ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ನೀಡಲು ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. 8 ವೆಟ್‌ವೆಲ್‌ಗಳನ್ನು ನಿರ್ಮಿಸಬೇಕಿದೆ. ನೆಟ್ ವರ್ಕಿಂಗ್ ಕಾಮಗಾರಿ ಆಗಬೇಕಿದೆ. ಮಡಿಕೇರಿ ಭಾಗದಲ್ಲಿ ಗುಡ್ಡ ಕುಸಿತಗಳು ಕಂಡುಬರುತ್ತಿರುವುದರಿಂದ ತಡೆಗೋಡೆಗಳು ನಿರ್ಮಾಣವಾಗಬೇಕು. ಮಡಿಕೇರಿಯಲ್ಲಿ ಸಂಗ್ರಹಣೆ ಮಾಡಿದ ಕಸ ಸುರಿಯಲು ಜಾಗವಿಲ್ಲ. ಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡಲು ಪಿಪಿಪಿ ಮಾದರಿಯಲ್ಲಿ ಅನುವು ಮಾಡಬೇಕು ಎಂದು ಕೋರಿದರು.
ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಮಾತನಾಡಿ, ಕೆ.ಆರ್.ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಸಮರ್ಪಕವಾಗಿ ಆಗುತ್ತಿಲ್ಲ. ಹಲವು ಕಡೆ ಬಾಕಿ ಇದೆ. ಪೈಪ್‌ಲೈನ್ ಕಾಮಗಾರಿಗೆ ರಸ್ತೆಗಳನ್ನು ಅಗೆದಿದ್ದು ವಾಹನಗಳು ಓಡಾಡಲು ತೊಂದರೆಯಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ 3 ವೆಟ್‌ವೆಲ್‌ಗಳು ತುಂಬಿ ಹರಿಯುತ್ತವೆ. ಆದ್ದರಿಂದ ಹೊಸ ವೆಟ್‌ವೆಲ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎಸ್.ರವೀಂದ್ರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ವರ್ಷಕ್ಕೂ ಕಾಮಗಾರಿ ನಡೆಸುತ್ತಿದ್ದರೆ ಅಂದಾಜು ವೆಚ್ಚ (ಎಸ್‌ಆರ್ ರೇಟ್) ಹೆಚ್ಚಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಢೀಕರಣ ಮಾಡಿ ಆ ಮೊತ್ತದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ತೆರಿಗೆ ಸಂಗ್ರಹ ವ್ಯವಸ್ಥಿತವಾಗಿ ಆಗಬೇಕು. ಅಗತ್ಯವಿರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ವಿಧಾನಸಭಾ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಕೆ. ವಿವೇಕಾನಂದ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net