ಹುಣಸೂರು ತಾಲೂಕು ಬಿಳಿಕೆರೆ ಐಟಿಐ ಕಾಲೇಜಿಗೆ ಎಲ್ ಆ್ಯಂಡ್ ಟಿ ಕಂಪನಿ ವತಿಯಿಂದ 10 ಕಂಪ್ಯೂಟರ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಎಂ.ಮಹೇಶ್, ಕೇಶವ ಕಾಂಚನ, ಚಂದ್ರಶೇಖರ್ ಇತರರಿದ್ದರು.
ಹುಣಸೂರು: ತಾಲೂಕಿನ ಬಿಳಿಕೆರೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗೆ ಎಲ್ ಆ್ಯಂಡ್ ಟಿ ಕಂಪನಿ ಮತ್ತು ಮೈಸೂರಿನ ರೋಟರಿ ಐವರಿ ಸಿಟಿ ಕ್ಲಬ್ ವತಿಯಿಂದ ಕಂಪ್ಯೂಟರ್ ಮತ್ತು ನೀರು ಶುದ್ಧೀಕರಣ ಯಂತ್ರವನ್ನು ಕೊಡುಗೆ ನೀಡಲಾಯಿತು.
ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಮೈಸೂರು ವಿಭಾಗದ ತಾಂತ್ರಿಕ ವ್ಯವಸ್ಥಾಪಕ ಎಂ.ಮಹೇಶ್ ಮತ್ತು ರೋಟರಿ ಐವರಿ ಕ್ಲಬ್ ಅಧ್ಯಕ್ಷ ಕೇಶವ ಕಾಂಚನ ಕೊಡುಗೆ ನೀಡಿದರು.
ಈ ವೇಳೆ ಮಾತನಾಡಿದ ಎಂ.ಮಹೇಶ್, ಎಲ್ ಆ್ಯಂಡ್ ಟಿ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ ನಿಧಿಯಡಿ 5 ಲಕ್ಷ ರೂ.ಗಳ ಮೌಲ್ಯದ ಒಟ್ಟು 10 ಕಂಪ್ಯೂಟರ್ ವಿತರಿಸಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶೈಕ್ಷಣಿಕ ಪರಿಸರ ವೃದ್ಧಿಸುವ, ಬಡ ವಿದ್ಯಾರ್ಥಿಗಳಿಗೆ ಕೌಶಲದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತಿದೆ. ಕೌಶಲ ಇಂದಿನ ಅಗತ್ಯವಾಗಿದ್ದು, ಪಠ್ಯಗಳೊಂದಿಗೆ ವಿದ್ಯಾರ್ಥಿಯು ತನ್ನಲ್ಲಿರುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಧುನಿಕ ಜಗತ್ತು ಪಠ್ಯಗಳಲ್ಲಿ ಹೊಂದಿದ ಅಂಕಗಳನ್ನು ಮಾತ್ರ ನೋಡುವುದಿಲ್ಲ. ಬದಲಾಗಿ ವ್ಯಕ್ತಿಯಲ್ಲಿರುವ ಸುಪ್ತ ಪ್ರತಿಭೆಯನ್ನು ಬಳಸಿಕೊಳ್ಳುವತ್ತ ಗಮನಿಸುತ್ತದೆ. ಎಐ ತಂತ್ರಜ್ಞಾನ ಇಂದಿನ ಅನಿವಾರ್ಯತೆಯಾಗಿದೆ. ಐಟಿಐ ಶಿಕ್ಷಣ ಕೂಡ ಸಾಕಷ್ಟು ಬದಲಾವಣೆಯನ್ನು ಹೊಂದುತ್ತಿದ್ದು, ಪ್ರಸ್ತುತ ಪರಿಸ್ಥಿತಿಗನುಗುಣವಾಗಿ ನಿಮ್ಮ ಶಿಕ್ಷಣವನ್ನು ರೂಢಿಸಿಕೊಳ್ಳಬೇಕು. ಅಲ್ಲದೆ ತಮ್ಮ ಸಂಸ್ಥೆಯ ಸಿಬ್ಬಂದಿ ಗ್ರಾಮೀಣ ಭಾಗಗಳಲ್ಲಿನ ಸರ್ಕಾರಿ ಶಾಲೆಗಳಿಗೆ ತೆರಳಿ 1ರಿಂದ 7ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ಗಣಿತ ಶಾಸ್ತ್ರ, ಆಂಗ್ಲಭಾಷೆಯ ಸರಳ ಕಲಿಕೆ ಕುರಿತು ತರಗತಿಗಳನ್ನು ನೀಡುತ್ತಾರೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೋಬಲ ವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದರು.
ರೋಟರಿ ಐವರಿ ಸಿಟಿ ಕ್ಲಬ್ ಅಧ್ಯಕ್ಷ ಕೇಶವ ಕಾಂಚನ ಮಾತನಾಡಿ, ಸಾಮಾಜಿಕ ಸೇವೆಯ ಪ್ರತಿರೂಪವಾಗಿ ರೋಟರಿ ತನ್ನ 125 ವರ್ಷಗಳ ಇತಿಹಾಸದಲ್ಲಿ ವಿಶ್ವದಾದ್ಯಂತ ಮನೆಮಾತಾಗಿದೆ. ನಿಸ್ವಾರ್ಥ ಸೇವೆಯೇ ರೋಟರಿಯ ಧ್ಯೇಯವಾಕ್ಯವಾಗಿದೆ. ದೇಶದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಬಹುಮುಖ್ಯವಾಗಿದೆ. ಇದೀಗ ಕಳೆದ 10ವರ್ಷಗಳಿಂದ ರೋಟರಿ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಟೀಚ್, ಹ್ಯಾಪಿ ಸ್ಕೂಲ್ ನಂತರ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿದೆ. ಇದೀಗ ಐಟಿಐ ಕಾಲೇಜಿಗೆ ಕ್ಲಬ್ ವತಿಯಿಂದ ಆರ್‌ಒ ಘಟಕ ನೀಡಲಾಗಿದೆ ಎಂದರು.
ವಿವಿಧ ಸಂಘ-ಸಂಸ್ಥೆಗಳು ಉಚಿತವಾಗಿ ಕೊಡುಗೆಗಳನ್ನು ನೀಡಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲ ಆರ್.ಜಿ.ಚಂದ್ರಶೇಖರ್ ಧನ್ಯವಾದಗಳನ್ನು ತಿಳಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಕಾಲೇಜಿನ ಕಾಂಪೌಂಡ್ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಶ್ರಮವಹಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳಾದ ಪ್ರಭಾಕರನ್, ಚೇತನ್ ಷಾ, ಜಿ.ಕೆ.ಕಮಲಾ, ಕೆ.ಮುರಳಿ ಮತ್ತು ಹಿರಿಯ ರೋಟರಿ ಸದಸ್ಯ ನಾಗರಾಜ್, ಅಧ್ಯಾಪಕರು, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.