ಸಮಯಕ್ಕೆ ಸರಿಯಾಗಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ : ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಡಾ.ಪಿ.ಶಿವರಾಜು ಮಾತನಾಡಿದರು.  ಕೆ.ಎಚ್.ರವಿ,  ಮಂಜುನಾಥ್, ಭಾಸ್ಕರ್ ಇತರರಿದ್ದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಡಾ.ಪಿ.ಶಿವರಾಜು ಮಾತನಾಡಿದರು. ಕೆ.ಎಚ್.ರವಿ, ಮಂಜುನಾಥ್, ಭಾಸ್ಕರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ
  • ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳು ಕುಂಠಿತಗೊಳ್ಳುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಆರ್‌ಗಳನ್ನು ನೇಮಿಸಿಕೊಂಡು ಸಮೀಕ್ಷೆ ಮುಗಿಸಬೇಕು
  • ಎಲ್ಲ ಬೆಳೆಗಳನ್ನು ವಿಮಾ ಯೋಜನೆಗೆ ಒಳಪಡಿಸಲು ಹಾಗೂ ಅಂತರ್ಜಲ ಮರುಪೂರಕ ಕಾರ್ಯವನ್ನು ನರೇಗಾ ಯೋಜನೆಯಡಿ ಸದುಪಯೋಗ ಪಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಬೇಕು. ರೈತರ ಪರವಾಗಿಯೇ ಕೆಲಸವಾಗಬೇಕು ಎಂದರು
ಮೈಸೂರು: ಬೆಳೆ ಕಟಾವು ಪ್ರಯೋಗಗಳನ್ನು ನಿಖರವಾಗಿ ನಡೆಸುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ದತ್ತಾಂಶ ಮತ್ತು ಇಳುವರಿಯನ್ನು ನಿಖರವಾಗಿ ದಾಖಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 2024-25ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ಕುರಿತು ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆ ಹಾಗೂ 2025-26ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ಕಟಾವು ಪ್ರಯೋಜನಗಳನ್ನು ಸಕಾಲದಲ್ಲಿ ಪ್ರಗತಿ ಸಾಧಿಸುವ ಸಂಬಂಧ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳು ಕುಂಠಿತಗೊಳ್ಳುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿಆರ್‌ಗಳನ್ನು ನೇಮಿಸಿಕೊಂಡು ಸಮೀಕ್ಷೆ ಮುಗಿಸಬೇಕು. ಸಮಯಕ್ಕೆ ಸರಿಯಾಗಿ ಬೆಳೆ ಸಮೀಕ್ಷೆ ಆಗಬೇಕು. ಇದಕ್ಕಾಗಿ ಒಂದು ಗ್ರಾಮಕ್ಕೆ ಆಸಕ್ತಿ ಇರುವ 4 ರಿಂದ 5 ಪಿಆರ್‌ಗಳನ್ನು ನೇಮಿಸಿಕೊಂಡು ಸಮೀಕ್ಷೆ ಮಾಡಬೇಕು. ಹಾಗಾದರೆ ಸಮೀಕ್ಷೆ ವೇಗವಾಗಿ ಮುಗಿಯಲಿದೆ ಎಂದು ಹೇಳಿದರು.
ಬೆಳೆ ಸಮೀಕ್ಷೆ ಸರಿಯಾಗಿ ಆಗದಿದ್ದಾಗ ರೈತರಿಗೆ ಬೆಳೆ ಹಾನಿ ಪರಿಹಾರ ಕೊಡುವಾಗ ಸಮಸ್ಯೆಯಾಗುತ್ತದೆ. ಮುಂಗಾರು ಬೆಳೆ, ಹಿಂಗಾರು ಬೆಳೆ, ಬೇಸಿಗೆ ಕಾಲದ ಬೆಳೆ ಹೀಗೆ ಆಯಾ ಸಮಯಕ್ಕೆ ಸರಿಯಾಗಿ ಸಮೀಕ್ಷೆ ಆಗದಿದ್ದಾಗ ರೈತರಿಗೆ ನಷ್ಟ ಭರಿಸಲು ಇಲಾಖೆಗೆ ಕಷ್ಟವಾಗಲಿದೆ. ಇದನ್ನು ಅಧಿಕಾರಿಗಳು ಅರಿತುಕೊಂಡು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆ ವೇಗವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಎಲ್ಲ ಬೆಳೆಗಳನ್ನು ವಿಮಾ ಯೋಜನೆಗೆ ಒಳಪಡಿಸಲು ಹಾಗೂ ಅಂತರ್ಜಲ ಮರುಪೂರಕ ಕಾರ್ಯವನ್ನು ನರೇಗಾ ಯೋಜನೆಯಡಿ ಸದುಪಯೋಗ ಪಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಬೇಕು. ರೈತರ ಪರವಾಗಿಯೇ ಕೆಲಸವಾಗಬೇಕು ಎಂದರು.
ಫಸಲ್ ಬಿಮಾ ಯೋಜನೆ ರೈತರಿಗೆ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ರೈತರಿಗೆ ಕೃಷಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿಕೊಡುವುದರ ಜತೆಗೆ ಮೊಬೈಲ್‌ಗಳಿಗೆ ಕೃಷಿಗೆ ಸಂಬಂಧಪಟ್ಟ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ತಿಳಿಸಿ ಅದರ
ಉಪಯೋಗದ ಬಗ್ಗೆ ತಿಳಿಸಿಕೊಡಬೇಕು. ಬೆಳೆಗಳಿಗೆ ಸಂಬಂಧಿಸಿದಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಭತ್ತ, ರಾಗಿ ಬೆಳೆಗೆ ಸೀಮಿತವಾಗದೆ ವಿವಿಧ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕು. ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿಕೊಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ರವಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ, ಕಾರ್ಯಪಾಲಕ ಅಭಿಯಂತರ ಭಾಸ್ಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಚಿತ್ರಾ, ಸಹಾಯಕ ನಿರ್ದೇಶಕ (ಸಾಂಖ್ಯಿಕ) ಎಂ.ವಿ.ಹೊನ್ನೇಗೌಡ, ಅಧಿಕಾರಿಗಳಾದ ಗಣೇಶ, ಕವಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net