ತಂತ್ರಜ್ಞಾನವನ್ನು ಇಂಜಿನಿಯರಿಂಗ್, ವ್ಯವಹಾರ ಜ್ಞಾನದೊಂದಿಗೆ ಸಂಯೋಜಿಸಿ

 ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಆಯೋಜಿಸಿದ್ದ ಓಪನ್ ಡೇ-2026 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಮ್ಮ ಪ್ರಾಜೆಕ್ಟ್‌ಗಳನ್ನು ಗಣ್ಯರಾದ ಗುಂಡಪ್ಪ ಗೌಡ, ಪಿ.ವಿಶ್ವನಾಥ್,  ಡಾ.ಬಿ. ಸದಾಶಿವೇಗೌಡ, ಉದಯಶಂಕರ್, ಕೆ.ಎಸ್.ಸುಂದರ್ ಕುತೂಹಲದಿಂದ ವೀಕ್ಷಿಸಿದರು.
ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಆಯೋಜಿಸಿದ್ದ ಓಪನ್ ಡೇ-2026 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಮ್ಮ ಪ್ರಾಜೆಕ್ಟ್‌ಗಳನ್ನು ಗಣ್ಯರಾದ ಗುಂಡಪ್ಪ ಗೌಡ, ಪಿ.ವಿಶ್ವನಾಥ್, ಡಾ.ಬಿ. ಸದಾಶಿವೇಗೌಡ, ಉದಯಶಂಕರ್, ಕೆ.ಎಸ್.ಸುಂದರ್ ಕುತೂಹಲದಿಂದ ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಓಪನ್ ಡೇ-2026 ಕಾರ್ಯಕ್ರಮ
  • ಇಂಜಿನಿಯರಿಂಗ್ ಶಿಕ್ಷಣದಲ್ಲಿ ಶೈಕ್ಷಣಿಕ ಮೇಲುಗೈ, ನವೀನತೆ ಹಾಗೂ ವೃತ್ತಿ ಅವಕಾಶಗಳ ಕುರಿತು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಉತ್ತಮ ವೇದಿಕೆ
ಮೈಸೂರು: ನಗರದ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ವತಿಯಿಂದ ಇತ್ತೀಚೆಗೆ ಓಪನ್ ಡೇ 2026 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದು ಇಂಜಿನಿಯರಿಂಗ್ ಶಿಕ್ಷಣದಲ್ಲಿ ಶೈಕ್ಷಣಿಕ ಮೇಲುಗೈ, ನವೀನತೆ ಹಾಗೂ ವೃತ್ತಿ ಅವಕಾಶಗಳ ಕುರಿತು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಉತ್ತಮ ವೇದಿಕೆಯಾಗಿತ್ತು. ವಿದ್ಯಾರ್ಥಿಗಳು, ಪಾಲಕರು ಬೋಧಕ ವೃಂದ ಹಾಗೂ ಹಳೆಯ ವಿದ್ಯಾರ್ಥಿಗಳ ಉತ್ಸಾಹದಿಂದ ಭಾಗವಹಿಸಿದ್ದರು. ವಿವಿಧ ವಿಭಾಗಗಳು ತಮ್ಮ ಪ್ರಾಜೆಕ್ಟ್‌ಗಳು, ಪ್ರಯೋಗಾಲಯಗಳು ಹಾಗೂ ನವೀನ ಆವಿಷ್ಕಾರ ಪ್ರದರ್ಶಿಸಿ ಗಮನ ಸೆಳೆದವು.
ವಿವಿಸಿಇ ಪ್ರಾಂಶುಪಾಲ ಡಾ. ಬಿ.ಸದಾಶಿವೇಗೌಡ ಅವರು ವಿವಿಸಿಇಯ ಶೈಕ್ಷಣಿಕ ಹಾಗೂ ಸಂಶೋಧನಾ ಸಾಧನೆ ವಿವರಿಸಿದರು. ಫ್ಯಾಕಲ್ಟಿ ಸಂಶೋಧನಾ ಲೇಖನ ಪ್ರಕಟಣೆಯಲ್ಲಿ ಸಂಸ್ಥೆ ಮೈಸೂರು ನಗರದಲ್ಲಿ ಪ್ರಥಮ ಸ್ಥಾನ, ಕರ್ನಾಟಕದಲ್ಲಿ 9ನೇ ಸ್ಥಾನ ಹಾಗೂ ದೇಶದ ಟಾಪ್ 300 ಸಂಸ್ಥೆಗಳಲ್ಲೊಂದು ಎಂದು ತಿಳಿಸಿದರು. 
ಉತ್ತಮ ಇಂಜಿನಿಯರಿಂಗ್ ಕಾಲೇಜು ಆಯ್ಕೆ ಮಾಡುವಾಗ ಶುಲ್ಕ, ಅನುಭವ ಸಂಪನ್ನ ಬೋಧಕ ವರ್ಗ, ಮೂಲಸೌಕರ್ಯ, ಸೆಂಟರ್ ಆಫ್ ಎಕ್ಸಲೆನ್ಸ್, ಕ್ರೀಡಾ ಸೌಲಭ್ಯ, ಪ್ರತಿಷ್ಠೆ, ಮಾನ್ಯತೆ ಹಾಗೂ ಪೂರಕ ಚಟುವಟಿಕೆ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಸಲಹೆ ನೀಡಿದರು. 
ಅರ್ಹ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ 1.08 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನ ನೀಡಲಾಗಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಸಂಸ್ಥೆ ಬದ್ಧವಾಗಿದೆ. ವಿವಿಸಿಇ ಕ್ಯಾಂಪಸ್‌ನಲ್ಲೇ ಕೆಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವು ವಿದ್ಯಾರ್ಥಿಗಳು ಓದುತ್ತಿರುವಾಗಲೇ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.  
ಇನ್ಫೋಸಿಸ್ ಲಿಮಿಟೆಡ್ ಮೈಸೂರು ಸಂಸ್ಥೆಯ ಅಸೋಸಿಯೇಟ್ ವೈಸ್‌ಪ್ರೆಸಿಡೆಂಟ್ ಕೆ.ಎಸ್.ಸುಂದರ್ ಅವರು ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಇಂಜಿನಿಯರಿಂಗ್ ಮಹತ್ವ ಕುರಿತು ತಿಳಿಸಿದರು.
ವಿದ್ಯಾರ್ಥಿಗಳು ಉತ್ತಮ ಸಮಸ್ಯೆ ಪರಿಹಾರಕರಾಗಿಯೂ, ವ್ಯವಹಾರ ಪರಿವರ್ತನೆಗೆ ನೆರವಾಗುವ ವೃತ್ತಿಪರರಾಗಿಯೂ ಬೆಳೆಯಬೇಕು. ತಂತ್ರಜ್ಞಾನವನ್ನು ಇಂಜಿನಿಯರಿಂಗ್ ಹಾಗೂ ವ್ಯವಹಾರ ಜ್ಞಾನದೊಂದಿಗೆ ಸಂಯೋಜಿಸಬೇಕು. ಕೃತಕ ಬುದ್ಧಿಮತ್ತೆ ಯುಗದಲ್ಲಿ ನಿರಂತರವಾಗಿ ಹೊಸ ಕೌಶಲ ಕಲಿತು ನವೀಕರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿವಿಸಿಇ ಹಳೆ ವಿದ್ಯಾರ್ಥಿ ಹಾಗೂ ಕೈರೋಸೆಮಿ ಬೆಂಗಳೂರು ಸಂಸ್ಥೆಯ ಹಿರಿಯ ಡಿಸೈನ್ ಇಂಜಿನಿಯರ್ ವಿ.ರವೀಂದ್ರ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿರುವ ಉದ್ಯೋಗಾವಕಾಶಗಳು, ಕೈಗಾರಿಕಾ ಸಂಪರ್ಕ ಮತ್ತು ಅಂತರ ಶಾಖಾ ಪ್ರಾಜೆಕ್ಟ್‌ಗಳ ಬಗ್ಗೆ ವಿವರಿಸಿದರು. 
ಸಿಇಟಿ ತಜ್ಞರು ಹಾಗೂ ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಉದಯ ಶಂಕರ್ ಅವರು ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಹಾಗೂ ಸರಿಯಾದ ಕಾಲೇಜು ಮತ್ತು ವಿಭಾಗ ಆಯ್ಕೆ ಕುರಿತು ಮಾರ್ಗದರ್ಶನ ನೀಡಿದರು.
ವಿವಿಸಿಇ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಉಪಪ್ರಾಂಶುಪಾಲ ಡಾ. ಶೋಭಾ ಶಂಕರ್, ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ.ಜಿ.ವಿ. ನವೀನ್ ಪ್ರಕಾಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net