ನಾಡಪ್ರಭು ಸ್ಮರಣೆ, ವರ್ಣರಂಜಿತ ಮೆರವಣಿಗೆ

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಶನಿವಾರ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಶನಿವಾರ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.
Published on
ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ಪ್ರಮುಖ ರಸ್ತೆಯಲ್ಲಿ ಶನಿವಾರ 30ಕ್ಕೂ ಹೆಚ್ಚು ಕಲಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ವರ್ಣರಂಜಿತ ಮೆರವಣಿಗೆ ನಡೆಯಿತು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ದೇವರಾಜ ಅರಸು ರಸ್ತೆ ಮಾರ್ಗವಾಗಿ ಕಲಾಮಂದಿರವರೆಗೆ ಅದ್ದೂರಿಯಾಗಿ ನಡೆಯಿತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಲಂಕೃತ ರಥದಲ್ಲಿ ಪ್ರತಿಷ್ಠಾಪನೆಯಾಗಿದ್ದ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಗೆ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಹೊತ್ತ ಅಲಂಕೃತ ರಥದೊಂದಿಗೆ ಡೊಳ್ಳು ಕುಣಿತ, ನಗಾರಿ, ಮಹಿಳಾ ವೀರಗಾಸೆ, ಕರಗ, ಮಹಿಷಾಸುರ ವೇಷ, ನರಸಿಂಹ ವೇಷ, ಪಟ್ಟದ ಕುಣಿತ, ನಂದಿ ಧ್ವಜ, ಮಡಿಕೇರಿ ಚಂಡೆ ಸೇರಿದಂತೆ 30ಕ್ಕೂ ಹೆಚ್ಚು ಜಾನಪದ ಮತ್ತು ಸಾಂಸ್ಕೃತಿಕ ಕಲಾತಂಡಗಳು, ಅಲಂಕೃತ ಎತ್ತಿನ ಗಾಡಿಗಳು, ಕೆಂಪೇಗೌಡರ ಚರಿತ್ರೆಯನ್ನು ಸಾರುವ, ಆದಿ ಚುಂಚನಗಿರಿ ಕ್ಷೇತ್ರದ ಪರಿಚಯ ಹಾಗೂ ರೈತರ ಬದುಕು ಕುರಿತು ಮಾಹಿತಿ ನೀಡುವ 5 ವಿಶೇಷ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಶಾಸಕರಾದ ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಖಂಡರಾದ ಸಂದೇಶ್ ಸ್ವಾಮಿ, ಪಿ.ಪ್ರಶಾಂತ್ ಗೌಡ, ಗಿರೀಶ್ ಗೌಡ ಇತರರಿದ್ದರು. ಮೆರವಣಿಗೆಯಲ್ಲಿ ಕೆಲ ನಾಯಕರು ನೃತ್ಯ ಮಾಡಿ ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net