ಕಾಕ್ರೋಚ್ ಜನತಾ ಪಾರ್ಟಿಗೆ ಶೀಘ್ರದಲ್ಲಿ ಮುಕ್ತಿ: ಡಿ.ವಿ ಸದಾನಂದಗೌಡ ವ್ಯಂಗ್ಯ

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಕುರಿತು ನಗರದಲ್ಲಿ ಪ್ರತಿಕ್ರಿಯೆ
  • ಮನೆಯಲ್ಲಿ ಜಿರಳೆ ಕಂಡರೆ ಔಷಧ ಹಾಕ್ತಾರೆ. ನಾವು ಕೂಡ ಜಿರಳೆಗಳಿಗೆ ಔಷಧ ಹಾಕ್ತಿದ್ದೇವೆ
ಮೈಸೂರು: ಕಾಕ್ರೋಚ್ ಜನತಾ ಪಾರ್ಟಿಗೆ ಶೀಘ್ರದಲ್ಲಿ ಮುಕ್ತಿ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವ್ಯಂಗ್ಯವಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಕುರಿತು ನಗರದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಮನೆಯಲ್ಲಿ ಜಿರಳೆ ಕಂಡರೆ ಔಷಧ ಹಾಕ್ತಾರೆ. ನಾವು ಕೂಡ ಜಿರಳೆಗಳಿಗೆ ಔಷಧ ಹಾಕ್ತಿದ್ದೇವೆ ಎಂದು ಗುಡುಗಿದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ನಾವು ಮಾಡೋದ್ದಲ್ಲ. ನಮ್ಮ ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗಾಗಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದು, ಅವರ ಕಾಲಾವಧಿ ಮುಗಿಯಲಿ. ಬಳಿಕ ನಮ್ಮ ವರಿಷ್ಠರು ಬದಲಾವಣೆ ಅವಶ್ಯಕತೆ ಇದ್ದರೆ ನಾಲ್ಕು ಗೋಡೆಗಳ ಮಧ್ಯೆ ನಿರ್ಣಯ ಮಾಡ್ತಾರೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ರಾಜ್ಯ ಭೇಟಿಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ. ನಮ್ಮ ನಾಯಕರು ಯುವಕರಿಗೆ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಕೊಟ್ಟಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಾರ್ಟಿಗಿಂತ ನಮ್ಮದು ದೊಡ್ಡ ಪಕ್ಷ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಮತ್ತೆ ಅಧಿಕಾರ ಮರಳಿ ಪಡೆಯಲು ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ನಿತಿನ್ ನವೀನ್ ಸಲಹೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸಭೆಗೆ ನಾನು ಆಕಾಂಕ್ಷಿ

ರಾಜ್ಯ ಸಭೆಗೆ ನಾನು ಕೂಡ ಆಕಾಂಕ್ಷಿ. ಈ ಕುರಿತು ಪಕ್ಷದ ವರಿಷ್ಠರಿಗೆ ತಿಳಿಸಿದ್ದು, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ. ಜತೆಗೆ ನಾನು ಈಗಾಗಲೇ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗಿದ್ದು, ಪಕ್ಷ ಬೇರೆ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ ಎಂದು ಹೇಳಿದರು.
ತೈಲ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜಗತ್ತಿನಲ್ಲಿ ಸ್ವಲ್ಪ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಸ್ವಲ್ಪ ಮಟ್ಟಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಮತದಾನ ಪಟ್ಟಿ ಸಮಗ್ರ ಪರಿಶೀಲನೆ (ಎಸ್‌ಐಆರ್) ಕುರಿತು ಕಾಂಗ್ರೆಸ್ ವಿರೋಧಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತವೈಖರಿಗೆ ಜನರು ಬೇಸತ್ತಿದ್ದಾರೆ. ಈಗ ಚುನಾವಣೆ ನಡೆದರೆ ಕಾಂಗ್ರೆಸ್ 50 ಸೀಟ್ ಸಹ ಗೆಲ್ಲೋದು ಕಷ್ಟ. ಹೀಗಾಗಿ ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡ್ತಿದೆ. ಜನರೇ ಕಾಂಗ್ರೆಸ್‌ಗೆ ಉತ್ತರ ಕೊಡುವ ಕೆಲಸವನ್ನು ಮಾಡ್ತಾರೆ ಎಂದು ಕುಟುಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net