ಹುಣಸೂರು : ನಗರದ ಗ್ರಾಮದೇವತೆ ಶ್ರೀ ಮುತ್ತುಮಾರಮ್ಮ ಅಮ್ಮನವರ ದೇವಾಲಯದ ನೂತನವಾಗಿ ನಿರ್ಮಾಣಗೊಂಡಿರುವ ಬೆಳ್ಳಿರಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಳೆಯುವ ಮೂಲಕ ಸೇವೆಗೆ ಸಮರ್ಪಿಸಿದರು.
ಸೋಮವಾರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನ್ನೆರಡೂವರೆ ಅಡಿ ಎತ್ತರದ ಭವ್ಯ ಬೆಳ್ಳಿರಥದಲ್ಲಿ ವಿರಾಜಮಾನರಾಗಿದ್ದ ಶ್ರೀ ಮುತ್ತುಮಾರಮ್ಮ ಅಮ್ಮನವರ ಉತ್ಸವ ಮೂರ್ತಿಯನ್ನು ಕಂಡು ಭಾವಪರವಶರಾಗಿ ಕೈಮುಗಿದು ಕ್ಷಣಕಾಲ ಸಿಎಂ ನಿಂತರು. ನಂತರ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮತ್ತಿತರ ಗಣ್ಯರೊಡನೆ ಭಕ್ತರ ಹರ್ಷೋದ್ಗಾರದ ನಡುವೆ ರಥವನ್ನು ಅನತಿದೂರ ಎಳೆದು ದೇವಿಯ ಸೇವೆಗೈದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಎಚ್.ವೈ.ಮಹದೇವ್, ಉಪಾಧ್ಯಕ್ಷ ಎಚ್.ಎಸ್.ಶಿವಯ್ಯ, ಪ್ರಧಾನ ಕಾರ್ಯದರ್ಶಿ ಅಶೋಕ ರಾಜಲಿಂಗಯ್ಯ, ಸಮಿತಿ ಸದಸ್ಯರು ಹಾಜರಿದ್ದರು.